ಯಾದಗಿರಿ: ಕೋವಿಡ್ 19 ದೃಢಪಟ್ಟ ಶಿಕ್ಷಕ ತಮಗೆ ನಿಯೋಜಿಸಿದ್ದ ಕೆಂಭಾವಿಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿಲ್ಲ.
ಹಾಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಆತಂಕ ಮತ್ತು ಭಯಪಡುವ ಅವಶ್ಯಕತೆ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.
ಜಿಲ್ಲೆಯ ಕೆಂಭಾವಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಜೂನ್ 24ರಂದು ಪರೀಕ್ಷಾ ಪೂರ್ವಭಾವಿ ಸಭೆ ನಡೆಸಿದ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರೊಬ್ಬರು ತಮಗೆ ಜ್ವರ ಇರುವುದಾಗಿ ತಿಳಿಸಿದ್ದು, ಆಗ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಶಿಕ್ಷಕನಿಗೆ ಮರುದಿನ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗುವುದು ಬೇಡ ಎಂದು ತಿಳಿಸಿದ್ದಾರೆ.
ಸದರಿ ಶಿಕ್ಷಕನಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾದ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಹೋಮ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಜಾಗಕ್ಕೆ ಮತ್ತೊಬ್ಬರನ್ನು ನಿಯೋಜಿಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಗಿದೆ. ಅಲ್ಲದೇ, ಕೋವಿಡ್-19 ದೃಡಪಟ್ಟ ಶಿಕ್ಷಕನ ಮನೆ ಸಮೀಪದಲ್ಲಿರುವ ಶಿಕ್ಷಕನಿಗೂ ಕೂಡ ಪರೀಕ್ಷಾ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.