Advertisement

ಸೋಂಕು ಹರಡುವ ಸ್ವರೂಪವೇ ಈಗ ಕಗ್ಗಂಟು!

10:23 AM Apr 21, 2020 | mahesh |

ಮಂಗಳೂರು: ಕೋವಿಡ್-19 ಎಲ್ಲಿ ಯಾವಾಗ, ಹೇಗೆ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂಬುದನ್ನು ಊಹಿಸಲೂ ಆಗದಷ್ಟರ ಮಟ್ಟಿಗೆ ಇದರ ಸ್ವರೂಪ ತಿಳಿಯದಾಗಿದ್ದು, ಇದಕ್ಕೆ ಉಪ್ಪಿನಂಗಡಿ ಮತ್ತು ಬಂಟ್ವಾಳದ ಎರಡು ಪ್ರಕರಣಗಳೇ ಸಾಕ್ಷಿ.

Advertisement

ಸೋಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯನ್ನು ಒಳಗೊಂಡಂತೆ ಜಿಲ್ಲಾಡಳಿತಕ್ಕೂ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ರವಿವಾರ ಮೃತಪಟ್ಟ ಬಂಟ್ವಾಳದ ಮಹಿಳೆಯ ಪುತ್ರ ಫೆ. 13ರಂದು ಅಬಧಾಬಿಯಿಂದ ಆಗಮಿಸಿದ್ದರು. ಅವರಲ್ಲಿ ಕೋವಿಡ್-19 ಹೋಲುವ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಆದರೆ 2 ತಿಂಗಳ ಬಳಿಕ ಅವರ ತಾಯಿಯಲ್ಲಿ ಕೋವಿಡ್-19 ಪಾಸಿಟಿವ್‌ ಕಂಡು ಬಂದು ಸಾವಿಗೆ ಕಾರಣವಾಗಿದೆ. ಇದರಿಂದಾಗಿ ಕೋವಿಡ್-19 ಹರಡುವಿಕೆ ಹೇಗೆ, ಯಾರಿಂದ ಎಂಬ ಬಗ್ಗೆ ಮತ್ತಷ್ಟು ಆತಂಕ ಆರಂಭವಾಗಿದೆ.

ಎ. 17ರಂದು ಕೋವಿಡ್-19 ಪಾಸಿಟಿವ್‌ ಕಂಡುಬಂದ ಉಪ್ಪಿನಂಗಡಿಯ ವ್ಯಕ್ತಿಯದ್ದೂ ಇದೇ ಕತೆ. ಅವರು ಹೊಸದಿಲ್ಲಿಯಿಂದ ಮಾರ್ಚ್‌ನಲ್ಲೇ ಬಂದಿದ್ದು, ಕ್ವಾರೆಂಟೈನ್‌ ಆಗಿದ್ದರು. ಮೊದಲ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟಿವ್‌ ಬಂದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯ ನಿಗಾದಲ್ಲಿರಿಸಲಾಗಿತ್ತು. ಎ. 13ರಂದು ಮತ್ತೆ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎ. 17ರಂದು ಬಂದ ವರದಿಯು ಪಾಸಿಟಿವ್‌ ಸೂಚಿಸಿತ್ತು. ಮೊದಲು ನೆಗೆಟಿವ್‌ ಇದ್ದ ವರದಿ ಮರು ಪರೀಕ್ಷೆಯಲ್ಲಿ ಪಾಸಿಟಿವ್‌ ಆಗಿರುವುದು ಕೋವಿಡ್-19ದ ಹರಡುವಿಕೆಯ ದಾರಿಯ ಬಗ್ಗೆ ಭೀತಿ ಹುಟ್ಟಿಸಿದೆ.

ಎರಡು ಬಾರಿ ಪರೀಕ್ಷೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯ ಡಾ| ದೀಪಕ್‌ ಅವರು, ಕೋವಿಡ್-19 ಲಕ್ಷಣಗಳು 5-14 ದಿನಗಳೊಳಗೆ ಕಂಡುಬರುತ್ತವೆ. ಕೆಲವರಲ್ಲಿ ಲಕ್ಷಣಗಳು ವಿಳಂಬವಾಗಿ ಕಾಣಿಸಿಕೊಳ್ಳಬಹುದು. ಅದಕ್ಕಾಗಿಯೇ ಎರಡೆರಡು ಬಾರಿ ಪರೀಕ್ಷೆ ಮಾಡಲಾಗುತ್ತದೆ. ಮೊದಲು ನೆಗೆಟಿವ್‌ ಬಂದವರಿಗೆ ಎರಡನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್‌ ಬರುವ ಸಾಧ್ಯತೆಗಳು ಇರುತ್ತವೆ. ಯಾವುದೇ ಪ್ರಕರಣಗಳ ಬಗ್ಗೆಯೂ ತಿಳಿಯದೇ ಏನನ್ನೂ ಹೇಳಲಾಗದು; ಪಾಸಿಟಿವ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ಒಟ್ಟು ಹಿಸ್ಟರಿ ಕಲೆ ಹಾಕಬೇಕಾಗುತ್ತದೆ ಎನ್ನುತ್ತಾರೆ.

ಒಂದೆಡೆ ಸೇರಬೇಡಿ
ಸೋಂಕು ವ್ಯಾಪಕವಾಗದಂತೆ ಸಾರ್ವ ಜನಿಕರು ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಮುಖ್ಯ. ರಜೆ ಬೇರೆ ಇರುವುದರಿಂದ ಮಕ್ಕಳು, ಹಿರಿಯರನ್ನೆದೆ ಅಕ್ಕಪಕ್ಕದ ಮನೆಯವರೊಂದಿಗೆ ಸೇರಿ ಗುಂಪುಗೂಡಿ ಆಡುವುದು, ಒಟ್ಟಾಗಿ ವಾಕಿಂಗ್‌ ಮಾಡುವುದು ಈಗಲೂ ನಡೆಯುತ್ತಿದೆ. ಕೆಲವು ಅಂಗಡಿಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆಯೇ ಒಟ್ಟಾಗಿ ಮುಗಿ ಬೀಳುವುದು ಕಾಣಿಸುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವ ಮುನ್ನೆಚ್ಚರಿಕೆ ವಹಿಸಿಕೊಂಡಾಗ ಮಾತ್ರ ಕೋವಿಡ್-19 ಮಹಾಮಾರಿಯಿಂದ ದೂರವಿರಲು ಸಾಧ್ಯ ಎಂಬು ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ.

Advertisement

ನಾನು ಮನೆಯಲ್ಲಿಯೇ ಸ್ವಂತ ವ್ಯವಹಾರ ನಡೆಸುತ್ತಿದ್ದು, ಹೊರಗೆ ಹೋಗುವುದೇ ಕಡಿಮೆ. ಫೆ. 5ರಂದು ಪ್ರವಾಸ ಪ್ರಯುಕ್ತ ವಿದೇಶಕ್ಕೆ ತೆರಳಿ ಫೆ. 13ರಂದು ಹಿಂದಿರುಗಿದ್ದೆ. ಬಳಿಕ ಹೊರಗೆಲ್ಲೂ ಹೋಗಿಲ್ಲ. ನನಗಾಗಲಿ, ಕುಟುಂಬದ ಇತರ ಸದಸ್ಯರಿಗಾಗಲಿ ಯಾವುದೇ ಆರೋಗ್ಯದ ಸಮಸ್ಯೆ ಕಂಡುಬಂದಿಲ್ಲ. ಅಜ್ಜಿಗೆ ಒಂದು ತಿಂಗಳ ಹಿಂದೆ ಬ್ರೈನ್‌ ಹ್ಯಾಮರೇಜ್‌ ಆಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುವಿನಲ್ಲಿ ಇದ್ದು ಗುಣಮುಖರಾಗಿ ವಾರ್ಡ್‌ಗೆ ಶಿಫ್ಟ್‌ ಆಗಿದ್ದಾರೆ.
– ಮೃತ ಮಹಿಳೆಯ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next