Advertisement

ಗಣಿನಾಡು ಬಳ್ಳಾರಿಯಲ್ಲಿ ಮತ್ತೊಂದು ಕೋವಿಡ್ ಸೋಂಕು ಪತ್ತೆ

12:04 PM May 13, 2020 | sudhir |

ಬಳ್ಳಾರಿ: ಗಣಿನಾಡು ಬಳ್ಳಾರಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ವುತ್ತಿರುವ ಬೆನ್ನಲ್ಲೇ ಜಿಲ್ಲೆಯ ಸಿರುಗುಪ್ಪ ತಾಲೂಕು ಗೋಸಬಾಳ ಗ್ರಾಮದ ಮಹಿಳೆಯೊಬ್ಬರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಮಂಗಳವಾರವಷ್ಟೇ ಸೋಂಕಿನಿಂದ ಗುಣವಾದ ಅದೇ ತಾಲೂಕಿನ ಬಾಲಕನನ್ನು ಬಿಡುಗಡೆ ಮಾಡಿದ ಮರುದಿನವೇ ಮತ್ತೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

Advertisement

ತೀವ್ರ ಜ್ವರದಿಂದ ಬಳಲುತ್ತಿದ್ದ ಸೋಂಕಿತ ಮಹಿಳೆಯು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಮುಂಜಾಗ್ರತೆ ವಹಿಸಿದ ಜಿಲ್ಲಾಡಳಿತ ಮಹಿಳೆಯ ಗಂಟಲು ದ್ರವ ಸ್ಯಾಂಪಲ್ ಪಡೆದು ಕೋವಿಡ್-19 ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಇರುವುದು ದೃಢವಾಗಿದೆ‌. ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಸ್ಪಷ್ಟಪಡಿಸಿದ್ದು, ಮೀಡಿಯಾ ಬುಲೆಟಿನ್ ನಲ್ಲಿ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಸೋಂಕಿತರನ್ನು ಕೂಡಲೇ ನಗರದ ಕೋವಿಡ್-19 ಆಸ್ಪತ್ರೆಗೆ ರವಾನಿಸಲಾಗಿದೆ. ಈ ಮೂಲಕ ವಿಮ್ಸ್ ಆಸ್ಪತ್ರೆಗೂ ಕೋವಿಡ್ ಸೋಂಕು ಸೋಕಿದಂತಾಗಿದೆ‌.

ಸೋಂಕಿತ ಮಹಿಳೆ ಎಲ್ಲಿಂದ ಬಂದಿದ್ದಾರೆ. ಅವರಿಗೆ ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ವಿಮ್ಸ್ ನಲ್ಲಿ ಎಲ್ಲೆಲ್ಲಿ ಸಂಚರಿಸಿದ್ದಾರೆ ಎಂಬುದನ್ನು ವಿಮ್ಸ್ ಅಧಿಕಾರಿಗಳು ಸಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಹೊಸಪೇಟೆಯ ಒಂದೇ ಕುಟುಂಬದ 11, ಬಳ್ಳಾರಿ ನಗರ 2, ಸಂಡೂರು 1 ಸಿರುಗುಪ್ಪ 2, ಕಂಪ್ಲಿ 1 ಸೇರಿ ಒಟ್ಟು ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿವೆ. ಈ ಪೈಕಿ ಹೊಸಪೇಟೆ 10, ಬಳ್ಳಾರಿ ನಗರ1, ಸಿರುಗುಪ್ಪ 1 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಬಾಕಿ 5 ಸಕ್ರಿಯ ಪ್ರಕರಣಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next