Advertisement
ರ್ಯಾಂಡಮ್ ತಪಾಸಣೆ:ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ 71 ವರ್ಷದ ವ್ಯಕ್ತಿಗೆ ಶನಿವಾರ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು ಅದು ಆರೋಗ್ಯ ಇಲಾಖೆ ರ್ಯಾಂಡಮ್ ಆಗಿ ನಡೆಸಿರುವ ವೈದ್ಯಕೀಯ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟೀವ್ ಬಂದಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಡಾ.ಯೋಗೇಶ್‌ಗೌಡ ಉದಯವಾಣಿಗೆ ತಿಳಿಸಿದರು. ಅವರಿಗೆ ಯಾವುದೇ ಪ್ರವಾಸದ ಹಿನ್ನಲೆ ಇಲ್ಲ. ನಮ್ಮ ಇಲಾಖೆಯ ಸರ್ವೇಕ್ಷಣಾ ತಂಡ ರ್ಯಾಂಡಮ್ ಆಗಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆಂದರು. ಇವರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಚಿಂತಾಮಣಿ ನಗರದ 71 ವರ್ಷದ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ದೃಢವಾಗಿರುವುದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 22ಕ್ಕೆ ಏರಿದೆ. ಆ ಪೈಕಿ ಗೌರಿಬಿದನೂರು, ಚಿಕ್ಕಬಳ್ಳಾಪುರ ನಗರದಲ್ಲಿ ತಲಾ ಒಬ್ಬರು ಮೃತ ಪಟ್ಟಿದ್ದು, ಒಟ್ಟು 13 ಮಂದಿ ಇದುವರೆಗೂ ರೋಗದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡರೂ ಈಗ ಸಂಪೂರ್ಣ 12 ಮಂದಿ ಗುಣಮುಖರಾಗಿದ್ದಾರೆ. ಉಳಿದ ಏಳು ಮಂದಿಗೆ ಚಿಕ್ಕಬಳ್ಳಾಪುರದ ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ 19 ಐಸೋಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಮಣಿ ನಗರ ತಲ್ಲಣ..
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿ ಪತ್ತೆಯಾಗುತ್ತಿದ್ದಂತರ ಚಿಂತಾಮಣಿ ನಗರ ಹಾಗೂ ಗ್ರಾಮೀಣ ಪ್ರದೇಶ ತಲ್ಲಣಗೊಂಡಿದೆ. ಸೋಂಕು ಪತ್ತೆಯಾಗಿರುವ ನಗರದ 10ನೇ ವಾರ್ಡ್ ಎನ್.ಆರ್.ಬಡಾವಣೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಬಡಾವಣೆಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.