ರೋಮ್: ಕೋವಿಡ್ ಸೋಂಕು ಹಿಡಿತಕ್ಕೆ ಸಿಗದ ರೀತಿಯಲ್ಲಿ ಹರಡುತ್ತಿದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿಶ್ವ ಸಂಸ್ಥೆ ನಿರಂತರವಾಗಿ ಜನರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮುಂದುವರಿಸುತ್ತಿದೆ. ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದ್ದರೂ ಜನರು ಅದನ್ನು ಮರೆಯುತ್ತಿದ್ದಾರೆ. ಜನರ ಬೇಜವಾಬ್ದಾರಿತನದಿಂದ ಸೋಂಕು ಅಧಿಕವಾಗುತ್ತಿದೆ ಎಂಬುದು ಅಧಿಕಾರಿಗಳ ಅವಲತ್ತು. ಸೋಂಕಿತರ ಸಾವಿನ ಸಂಖ್ಯೆ 4.92 ಲಕ್ಷವಾಗಿದ್ದು ಇನ್ನೂ ಹೆಚ್ಚಳವಾಗುವ ಭೀತಿಯಿದೆ.
ಬೀಜಿಂಗ್‌ನಲ್ಲಿ ಎರಡನೇ ಹಂತದ ಕೋವಿಡ್ ಸೋಂಕು ಹೆಚ್ಚುತ್ತಿರುವುದರ ಜತೆಗೆ ಅಮೆರಿಕದಂತಹ ದೇಶಗಳಲ್ಲಿಯೂ ಸೋಂಕು ಅಧಿಕವಾಗುತ್ತಿದೆ. ಭಾರತ, ಪಾಕಿಸ್ಥಾನ ಮತ್ತು ಮೆಕ್ಸಿಕೋಗಳಲ್ಲಿಯೂ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚು ಸೋಂಕಿತರಿರುವ ದೇಶ ದಕ್ಷಿಣಾ ಆಫ್ರಿಕಾ ಆಗಿದೆ. 6579 ಹೊಸ ಸೋಂಕಿನೊಂದಿಗೆ ಇಲ್ಲಿ ಒಟ್ಟು 1,18375 ಮಂದಿ ಸೋಂಕಿತರಿದ್ದಾರೆ.
ಬ್ರಿಟನ್‌ನಲ್ಲಿ ಕೂಡ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಇಲ್ಲಿ ಮತ್ತೆ ಕಠಿನ ಲಾಕ್‌ಡೌನ್ ನಿಯಮವನ್ನು ಹೇರುವುದಾಗಿ ಆರೋಗ್ಯ ಸಚಿವರು ಎಚ್ಚರಿಸಿದ್ದಾರೆ. ಇಟಲಿಯಲ್ಲಿ ಕೂಡ ಸೋಂಕು ತೀವ್ರವಾಗಿ ಹರಡುತ್ತಿದೆ. ಸೌತರ್ನ್ ಕ್ಯಾಂಪೇನಿಯಾದ ಗವರ್ನರ್ ಇಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರಿರುವ ಪ್ರದೇಶದ ಜನರು ಹೊರ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಅವರಿಗೆ ಬೇಕಾಗಿರುವ ಆಹಾರ ಸಾಮಗ್ರಿಗಳನ್ನು ಆಯಾ ಪ್ರದೇಶಕ್ಕೆ ತೆರಳಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಸ್ವೀಡನ್, ಅರ್ಮೇನಿಯಾ, ಅಲೆºàನಿಯಾ, ಕಝಕಿಸ್ಥಾನ್, ಉಕ್ರೈನ್ ಮೊದಲಾದ 11 ದೇಶಗಳಲ್ಲಿ ಸೋಂಕು ತೀವ್ರವಾಗುತ್ತಿದೆ.
ಬೀಜಿಂಗ್ ಮತ್ತೆ ಲಾಕ್‌ಡೌನ್ ಆಗಿದ್ದು ಶುಕ್ರವಾರ 11 ಹೊಸ ಸೋಂಕಿತರು ಪತ್ತೆಯಾಗುವುದರ ಜತೆಗೆ ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 260ಕ್ಕೇರಿದೆ.
ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 25.05 ಲಕ್ಷವಾಗಿದ್ದು, ಸಾವಿನ ಸಂಖ್ಯೆ 1.26 ಲಕ್ಷವಾಗಿದೆ. ಬ್ರಜಿಲ್‌ನಲ್ಲಿ ಯಾವುದೇ ಹೊಸ ಸೋಂಕು, ಸಾವಿನ ಪ್ರಮಾಣ ವರದಿಯಾಗಿಲ್ಲ. ಇಲ್ಲಿ ಒಟ್ಟು 12.33 ಲಕ್ಷ ಸೋಂಕಿತರಿದ್ದಾರೆ. 55 ಸಾವಿರ ಮಂದಿ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾದಲ್ಲಿ 6.20 ಲಕ್ಷ ಮಂದಿ ಸೋಂಕಿತರಿದ್ದಾರೆ. 6800 ಹೊಸ ಸೋಂಕು ಶುಕ್ರವಾರ ಪತ್ತೆಯಾಗಿದೆ. 24 ಗಂಟೆಗಳಲ್ಲಿ 176 ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 8 ಸಾವಿರವನ್ನು ದಾಟಿದೆ. ಭಾರತದಲ್ಲಿ ಶುಕ್ರವಾರ 822 ಹೊಸ ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 4.91 ಲಕ್ಷವಾಗಿದೆ. ಸಾವಿನ ಸಂಖ್ಯೆ 15 ಸಾವಿರವನ್ನು ದಾಟಿದೆ.