Advertisement

ಕೋವಿಡ್‌ ಕಸಿಯಲಿದೆ ಶೇ. 45 ಮಂದಿಯ ವಸತಿ

12:39 PM May 17, 2020 | sudhir |

ಮಣಿಪಾಲ : ಕೋವಿಡ್‌ ವೈರಸ್‌ ಈಗಿರುವ ದರದಲ್ಲೇ ನಿರುದ್ಯೋಗ ಪ್ರಮಾಣವನ್ನು ಹೆಚ್ಚಿಸುತ್ತಾ ಹೋದರೆ ವರ್ಷಾಂತ್ಯಕ್ಕಾಗುವಾಗ ವಸತಿ ರಹಿತರ ಪ್ರಮಾಣವೂ ಶೇ. 45ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದರಲ್ಲಿ ಅಂದಾಜಿಸಲಾಗಿದೆ.

Advertisement

ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಹೊಸದಾಗಿ 2.5 ಲಕ್ಷ ಮಂದಿ ನಿರ್ವಸಿತರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಇದರೊಂದಿಗೆ ನಿರ್ವಸಿತರ ಸಂಖ್ಯೆ 8 ಲಕ್ಷಕ್ಕೇರಲಿದೆ ಎಂದು ಕೊಲಂಬಿಯ ವಿವಿಯ ಅರ್ಥವಾಸ್ತ್ರ ವಿಭಾಗ ನಡೆಸಿದ ಈ ಅಧ್ಯಯನದಲ್ಲಿ ಅಂದಾಜಿಸಲಾಗಿದೆ.

ಅಮೆರಿಕದಲ್ಲಿ ಎಪ್ರಿಲ್‌ ತಿಂಗಳೊಂದರಲ್ಲೇ ದಾಖಲೆಯ 20.5 ದಶಲಕ್ಷ ಉದ್ಯೋಗ ನಷ್ಟ ಸಂಭವಿಸಿ ನಿರುದ್ಯೋಗ ದರ ಶೇ. 14.5ಕ್ಕೇರಿದೆ. ಉದ್ಯೋಗ ಮಾರುಕಟ್ಟೆ ಈ ರೀತಿಯ ಮಹಾಪತನ ಕಂಡಿರುವುದು ಇದೇ ಮೊದಲು. ಒಂದೇ ತಿಂಗಳಲ್ಲಿ ನಿರುದ್ಯೋಗ ದರ ಶೇ. 10 ದಾಟಿದ ನಿದರ್ಶನ ಇಲ್ಲ ಎಂದಿದ್ದಾರೆ ನಿರುದ್ಯೋಗ ಅಂಕಿಅಂಶಗಳ ವಿಶ್ಲೇಷಕ ಬ್ರೆಂಡನ್‌ ಓ ಫ್ಲಾಹರ್ಟಿ.
ಮೇ ತಿಂಗಳಲ್ಲಿ ನಿರುದ್ಯೋಗ ದರ ಎಪ್ರಿಲ್‌ಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ. ನಿರುದ್ಯೋಗಕ್ಕೂ ವಸತಿ ಸಮಸ್ಯೆಗೂ ನೇರವಾದ ಸಮಸ್ಯೆಯಿದೆ. ನಿರುದ್ಯೋಗ ಹೆಚ್ಚಿದಷ್ಟು ವಸತಿ ರಹಿತರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. 2007ರಿಂದ 2009ರ ನಡುವಿನ ನಿರುದ್ಯೋಗ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಈ ಅಂಶ ತಿಳಿದು ಬಂದಿದೆ. ನಿರುದ್ಯೋಗ ಪ್ರಮಾಣ ಶೇ. 1ರಷ್ಟು ಹೆಚ್ಚಿದರೆ ವಸತಿ ರಹಿತರ ಸಂಖ್ಯೆ ಪ್ರತಿ 10,000 ಜನರಿಗೆ ಶೇ.65ರಂತೆ ಹೆಚ್ಚುತ್ತದೆ.

ಈಗ ಮಾಡಿರುವ ನಿರುದ್ಯೋಗ ಅಂದಾಜುಗಳು ಸರಿಯಾದರೆ ಮತ್ತು ನಿರುದ್ಯೋಗ ಹಾಗೂ ವಸತಿ ಸಮಸ್ಯೆ ಹಿಂದಿನ ದಾಖಲೆಗಳ ಪ್ರಕಾರವೇ ಮುಂದುವರಿದರೆ ಅಧ್ಯಯನದಲ್ಲಿ ಹೇಳಿದಷ್ಟು ಪ್ರಮಾಣದಲ್ಲಿ ವಸತಿ ರಹಿತರು ಸೃಷ್ಟಿಯಾಗಲಿದ್ದಾರೆ ಎಂದು ಫ್ಲಾಹರ್ಟಿ ಹೇಳಿದ್ದಾರೆ.

ಅಮೆರಿಕದಲ್ಲಿ ಕೋವಿಡ್‌ನಿಂದಾಗಿ ನೌಕರಿ ಕಳೆದುಕೊಂಡಿರುವ ಲಕ್ಷಗಟ್ಟಲೆ ಮಂದಿ ಸರಕಾರದ ನಿರುದ್ಯೋಗ ಸೌಲಭ್ಯಗಳನ್ನು ಅವಲಂಬಿಸಿದ್ದಾರೆ. ಇನ್ನೂ ಸುಮಾರು 30 ಲಕ್ಷ ಮಂದಿ ಕಳೆದ ವಾರ ನಿರುದ್ಯೋಗ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದ್ದಾರೆ.ಇದರೊಂದಿಗೆ ಮಾರ್ಚ್‌ ನಿಂದೀಚೆಗೆ ನಿರುದ್ಯೋಗ ಸೌಲಭ್ಯಕ್ಕಾಗಿ ಮೊದಲ ಬಾರಿ ಅರ್ಜಿ ಸಲ್ಲಿಸಿದವರ ಸಂಖ್ಯೆ 3.65 ಕೋಟಿಗೇರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next