Advertisement

ಕೋವಿಡ್‌ ಸಂಕಷ್ಟ ಕಾಲದಲ್ಲಿ ಬ್ರೆಜಿಲ್‌ ನರ್ಸ್‌ಗಳ ಕಥೆ-ವ್ಯಥೆ

05:13 PM May 28, 2020 | sudhir |

ಸಾವೊ ಪಾಲೊ: ಬ್ರೆಜಿಲ್‌ನಲ್ಲಿ ಕೋವಿಡ್‌-19 ಸೋಂಕಿಗೊಳಗಾಗಿ 157 ನರ್ಸ್‌ಗಳು ಮೃತಪಟ್ಟಿದ್ದಾರೆ. ಇನ್ನಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯ ನರ್ಸ್‌ಗಳು ಕೋವಿಡ್‌ಗೆ ಬಲಿಯಾಗಿಲ್ಲ.

Advertisement

ಆದರೆ ಅಧ್ಯಕ್ಷ ಝೈರ್‌ ಬೊಲ್ಸನಾರೊ ಮತ್ತು ಅವರ ಬೆಂಬಲಿಗರು ಕೋವಿಡ್‌ ಬಿಕ್ಕಟ್ಟನ್ನು ನಗಣ್ಯ ಮಾಡುವುದನ್ನು ಇನ್ನೂ ಮುಂದುವರಿಸಿದ್ದಾರೆ.

ಡುವರ್ಟೆ ಎಂಬ ನರ್ಸ್‌ನ ಕಥೆ
ಮರಿಯಾ ಅಪಾರೆಸಿಡ ಡುವರ್ಟೆ ಅವರು ಸಾವೊ ಪಾಲೊ ಹೊರವಲಯದ ಆಸ್ಪತ್ರೆಯೊಂದರ ತುರ್ತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಕರ್ತವ್ಯನಿಷ್ಠೆ, ನಗುಮೊಗದ ಸೇವೆ ಮತ್ತು ಹಾಸ್ಯಪ್ರವೃತ್ತಿಯಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಆದರೆ ಕೋವಿಡ್‌ ಮಹಾಮಾರಿ ಬ್ರೆಜಿಲ್‌ನ ಉದ್ದಗಲಕ್ಕೂ ವ್ಯಾಪಿಸಿ ನೂರಾರು ಹಾಗೂ ಅನಂತರ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಾಗ 63ರ ಹರೆಯದ ಡುವರ್ಟೆ ತಳಮಳಕ್ಕೊಳಗಾದರು.

ಅವರ ಕಣ್ಣದುರೇ ನಾಲ್ವರು ಸಹೋದ್ಯೋಗಿಗಳು ಕೋವಿಡ್‌ಗೆ ಬಲಿಯಾದರು. ಅನೇಕರು ಸೋಂಕುಪೀಡಿತರಾದರು. ಇನ್ನು ಮುಂದಿನ ಸರದಿ ತನ್ನದೆಂದು ಅವರಿಗೆ ಅನಿಸತೊಡಗಿತು. ಹಾಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದರು.

ಭೀತಿ ನಿಜವಾಯಿತು
ಎ. 10ರಂದು ಅವರು ಭೀತಿಪಟ್ಟಿದ್ದು ನಿಜವಾಯಿತು. ಕ್ಯಾರಪಿಕ್ಯುಬ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ತನ್ನ ಕೊನೆಯ ಪಾಳಿಯನ್ನು ಮುಗಿಸಿದ 24 ತಾಸುಗಳ ಬಳಿಕ ಕೋವಿಡ್‌ ಲಕ್ಷಣಗಳೊಂದಿಗೆ ಅವರನ್ನು ಆಸ್ಪತ್ರೆಗೆ ಭರ್ತಿ ಮಾಡಬೇಕಾಯಿತು ಮತ್ತು ಕೃತಕ ಉಸಿರಾಟ ಕಲ್ಪಿಸಬೇಕಾಯಿತು.

ಮುಂದಿನ ದಿನಗಳಲ್ಲಿ ಅವರ ನಾಲ್ವರು ಮಕ್ಕಳ ಪೈಕಿ ಇಬ್ಬರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಬೇಕಾಯಿತು. ಅವರು ಚೇತರಿಸಿಕೊಂಡು ಬಿಡುಗಡೆಗೊಂಡರು. ಆದರೆ ಅವರ ಅಮ್ಮ ಮಾತ್ರ ಮೇ 3ರಂದು ಇಹಲೋಕ ತ್ಯಜಿಸಿದರು.

ಅಮ್ಮನನ್ನು ಕೊಂದರು
ತನ್ನ ಅಮ್ಮ ಮಧುಮೇಹ ಮತ್ತು ರಕ್ತದ ಏರೊತ್ತಡದಿಂದ ಬಳಲುತ್ತಿದ್ದರು. ಅವರಿಗೆ ಸರಿಯಾದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ವನ್ನು ಒದಗಿಸಿರಲಿಲ್ಲ. ಆಕೆ ತೆಳ್ಳನೆಯ ಕ್ಯಾಪ್‌ ಧರಿಸಿ ಕೆಲಸ ಮಾಡುತ್ತಿದ್ದರು ಮತ್ತು ತಾನೇ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸುತ್ತಿದ್ದರು. ಸರಕಾರಿ ಅಧಿಕಾರಿಗಳು ಆಕೆಯನ್ನು ಮುಂಚೂಣಿಯಲ್ಲಿ ದುಡಿಸಿದ್ದು ತಪ್ಪು. ತನ್ನ ಅಮ್ಮನನ್ನು ಕೊಲ್ಲಲಾಯಿತು. ಆಕೆ ಕುಟುಂಬದ ಆಧಾರಸ್ತಂಭವಾಗಿದ್ದರು ಎಂದು ಡುವರ್ಟೆ ಅವರ ಪುತ್ರಿ ಆ್ಯಂಡ್ರಿಸ ರೀನಾ ಹೇಳುತ್ತಾರೆ.

Advertisement

ಮಾರ್ಚ್‌ ಮಧ್ಯಭಾಗದ ವೇಳೆ ಬ್ರೆಜಿಲ್‌ಗೆ ಕೋವಿಡ್‌ ಕಾಲಿರಿಸಿದ ಬಳಿಕ ಬಲಿಯಾಗಿರುವ ಕನಿಷ್ಠ 157 ನರ್ಸ್‌ಗಳಲ್ಲಿ ಡುವರ್ಟೆ ಒಬ್ಬರು. ಅಮೆರಿಕದದಂಥ ಕೋವಿಡ್‌ನ‌ ಬೇರೆ ಹಾಟ್‌ಸ್ಪಾಟ್‌ಗಳಲ್ಲಿ ಮಡಿದ ನರ್ಸ್‌ಗಳಿಗಿಂತ ಈ ಸಂಖ್ಯೆ ಅಧಿಕ. ಅಮೆರಿದಲ್ಲಿ ಕೋವಿಡ್‌ಗೆ ಕನಿಷ್ಠ 146 ಹಾಗೂ ಬ್ರಿಟನ್‌ನಲ್ಲಿ ಕನಿಷ್ಠ 77 ನರ್ಸ್‌ಗಳು ಬಲಿಯಾಗಿದ್ದಾರೆ. ಬ್ರೆಜಿಲ್‌ನಲ್ಲಿ 114 ವೈದ್ಯರು ಕೂಡ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತೆರೆಮರೆಯ ಹೀರೋಗಳು
ಬ್ರೆಜಿಲ್‌ನಲ್ಲಿ ಸೋಂಕಿನ ವಿರುದ್ಧ ಹೋರಾಟದಲ್ಲಿ ನರ್ಸ್‌ಗಳು ತೆರೆಮರೆಯ ಹೀರೋಗಳಾಗಿದ್ದಾರೆ. ಆದರೆ ವೈದ್ಯರಿಗೆ ಸಿಗುತ್ತಿರುವ ಮನ್ನಣೆ ಮತ್ತು ನರ್ಸ್‌ಗಳಿಗೆ ಸಿಗುತ್ತಿರುವ ಮನ್ನಣೆ ನಡುವೆ ಗಾಢ ಅಂತರವಿದೆ. ವೈದ್ಯರನ್ನು ಹೀರೋಗಳಂತೆ ಕಾಣಲಾಗುತ್ತಿದೆ ಮತ್ತು ನರ್ಸ್‌ಗಳನ್ನು ಮರೆಯಲಾಗುತ್ತಿದೆ ಎಂದು ಬ್ರೆಜಿಲ್‌ ನರ್ಸಿಂಗ್‌ ಒಕ್ಕೂಟದ ಅಧ್ಯಕ್ಷೆ ಮನೊಯಿಲ್‌ ನೇರಿ ವಿಷಾದಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next