Advertisement

ಮರಳು ಅಕ್ರಮಕ್ಕೆ ಕೋವಿಡ್ 19 ಬ್ರೇಕ್‌

04:40 PM Apr 21, 2020 | Suhan S |

ಹಾವೇರಿ: ಯಾರಿದಂಲೂ ನಿಲ್ಲಿಸಲು ಸಾಧ್ಯವಾಗದೇ ಇದ್ದ ಅಕ್ರಮ ಮರಳು ಸಾಗಾಟಕ್ಕೆ ಈಗ ಬ್ರೆಕ್‌ ಬಿದ್ದಿದ್ದು, ಎಲ್ಲವೂ ಸ್ತಬ್ಧಗೊಂಡಿದೆ.ಕೋವಿಡ್ 19 ಮಹಾಮಾರಿ ಈಗ ಎಲ್ಲ ಅಕ್ರಮಗಳಿಗೆ ಬ್ರೆಕ್‌ ಹಾಕಿದ್ದು, ಇದರಿಂದ ಪ್ರಾಕೃತಿಕ ಸಂಪತ್ತು ರಕ್ಷಣೆಯಾಗುತ್ತಿದೆ. ನದಿ-ಹಳ್ಳ-ಕೊಳ್ಳಗಳನ್ನು ಬಗೆಯುವ ಕೆಲಸ ಅಕ್ಷರಶಃ ನಿಂತಿದೆ. ನಿತ್ಯ ನೂರಾರು ಲಾರಿಗಳಷ್ಟು ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದು ಈಗ ಸಂಪೂರ್ಣ ಬಂದಾಗಿದೆ.

Advertisement

ಅಕ್ರಮ ಮರಳು ಸಾಗಾಟ ತಹಬದಿಗೆ ತರುವ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಹಲವು ಆದೇಶಗಳನ್ನು ಮಾಡಿದ್ದರು. ಆದರೂ ಅಕ್ರಮ ಮರಳು ಸಾಗಾಟ ಮಾತ್ರ ಒಂದಿನಿತೂ ನಿಂತಿರಲಿಲ್ಲ. ಅದೆಷ್ಟೋ ಸಲ ಪರಿಸರ ಪ್ರೇಮಿಗಳು ಇದರ ವಿರುದ್ಧ ಪ್ರತಿಭಟನೆ-ಮನವಿ ಸಲ್ಲಿಸುತ್ತ ಬಂದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಅಕ್ರಮ ಮರಳು ಮಾಫಿಯಾದಿಂದ ಜಿಲ್ಲೆ ತತ್ತರಿಸಿ ಹೋಗಿತ್ತು. ಇದಕ್ಕೆ ಹೇಳುವರು, ಕೇಳುವರು ಯಾರೂ ಇರಲಿಲ್ಲ. ಜಿಲ್ಲೆಯ ಪ್ರಮುಖ ನದಿಗಳಾದ ತುಂಗಭದ್ರಾ-ವರದಾ ನದಿಗಳ ಒಡಲು ಈ ಮರಳು ಮಾಫಿಯಾ ಹಿಡಿತದಿಂದ ಬರಿದಾಗುತ್ತ ಬಂದಿತ್ತು. ನಿತ್ಯ ನೂರಾರು ಲಾರಿಗಳು ಹಗಲಿರುಳೆನ್ನದೇ ಸಂಚರಿಸುತ್ತಿದ್ದವು.

ಸ್ಥಳೀಯವಾಗಿ ಸುಲಭವಾಗಿ ಮರಳು ದೊರೆಯದಿದ್ದರೂ ದೂರದ ಬೆಂಗಳೂರು – ಬೆಳಗಾವಿಯವರೆಗೂ ಇಲ್ಲಿಯ ಮರಳು ನಿರಾಯಾಸವಾಗಿ ತಲುಪುತ್ತಿತ್ತು. ಈಗ ಇದೆಲ್ಲದಕ್ಕೂ ಅಲ್ಪವಿರಾಮ ಸಿಕ್ಕಿದೆ. ಕೊರೊನಾ ಮಹಾಮಾರಿಯಿಂದ ಅಕ್ರಮ ಮರಳು ಮಾಫಿಯಾ ತತ್ತರಿಸಿದೆ. ಭೂತಾಯಿಗೆ ಈಗ ಕೊಂಚ ನೆಮ್ಮದಿ ಸಿಕ್ಕಿದೆ. ರಸ್ತೆಗಳಲ್ಲಿ ಈಗ ವಾಹನಗಳ ಸಂಚಾರವೇ ಇಲ್ಲದಂತಾಗಿದೆ. ಗೌಜು-ಗದ್ದಲ ಎಲ್ಲವೂ ಈಗ ನಿಂತಿದೆ. ಎಲ್ಲವೂ ಸ್ತಬ್ಧಗೊಂಡಿದೆ.

ಜಿಲ್ಲೆಯ ತುಂಗಾ ಹಾಗೂ ವರದಾ ನದಿಗಳಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬಂಥ ಸ್ಥಿತಿ ಇತ್ತು. ಆದರೆ ಈ ಕೋವಿಡ್ 19 ಮಹಾಮಾರಿ ಮರಳು ಮಾಫಿಯಾದ ಮಗ್ಗಲು ಮುರಿದಿದೆ. ತನ್ಮೂಲಕ ಕೋವಿಡ್ 19  ದುರಾಸೆಯ ನರನಿಗೆ ಪಾಠ ಕಲಿಸಿದೆ. ಪ್ರಕೃತಿಯ ರಕ್ಷಣೆಯೂ ಆಗುತ್ತಿದೆ. -ನಾಗಪ್ಪ, ನಾಗರಿಕ

 

Advertisement

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next