ನವದೆಹಲಿ:ಕೋವಿಡ್ 19 ವೈರಸ್ ವಿರುದ್ಧ ಜೀವಿತಾವಧಿವರೆಗಿನ ಅಗೋಚರ ಹೋರಾಟವಾಗಿದೆ. ಇದು ಮಾನವೀಯತೆ ವಿರುದ್ಧದ ಹೋರಾಟವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಭಾನುವಾರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತ ಕೋವಿಡ್ 19 ವೈರಸ್ ವಿರುದ್ಧ ಸಮರೋಪಾದಿಯಲ್ಲಿ ಹೋರಾಡುತ್ತಿದೆ. ಅಲ್ಲದೇ ಎಲ್ಲಾ ಸರ್ಕಾರಿ ಸಂಸ್ಥೆಗಳು ಕೂಡಾ ನಿಕಟ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂವಹನಕ್ಕಾಗಿ ಸೇನೆಯ ತಜ್ಞರು, ವೈದ್ಯಕೀಯ ನೆರವು ಸೇರಿದಂತೆ ಇತರ ಎಲ್ಲಾ ಸಂಸ್ಥೆಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಸಿಂಗ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರ ವೆಂಟಿಲೇಟರ್ಸ್, ಮಾಸ್ಕ್, ಪಿಪಿಇಗಳನ್ನು ತಯಾರಿಸಲು ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ಭಾರತೀಯ ಸೇನೆಗೂ ಕೂಡಾ ರಜೆಗೆ ಕಡಿವಾಣ ಹಾಕಲಾಗಿದ್ದು, ಕೋವಿಡ್ ಸೋಂಕು ಪ್ರಮಾಣವನ್ನು ಪರಿಶೀಲಿಸಲು ಮನೆಯಿಂದಲೇ ಕೆಲಸ ಮಾಡಿಸಲಾಗುತ್ತಿದೆ ಎಂದು ಸಿಂಗ್ ವಿವರ ನೀಡಿದರು. ಇತರ ಪ್ರದೇಶ, ಊರು, ರಾಜ್ಯದಿಂದ ಬಂದ ಪ್ರತಿಯೊಬ್ಬ ಯೋಧ, ಸಿಬ್ಬಂದಿಗೂ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದು ಹೇಳಿದರು.
ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಎಲ್ಲಾ ರೀತಿಯಿಂದಲೂ ಸೂಚಿಸಲಾಗಿದೆ. ಹಡಗು ಮತ್ತು ಸಬ್ ಮರೈನ್ ಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಸಾಮಾಜಿಕ ಅಂತರ ಕಠಿಣವಾಗಿ ಜಾರಿಗೆ ತರಲು ಕಷ್ಟ ಎಂದು ತಿಳಿಸಿದರು.