ಬೆಂಗಳೂರು: ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿರುವ ಮಾರ್ಗಸೂಚಿಯನ್ನು ಜೂ.15ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದೆ.
ಅದರಂತೆ ಜೂ. 15ರಿಂದ ಎರಡು ವಾರಗಳ ಅವಧಿಗೆ ಒಂದು ಕೋರ್ಟ್‌ನಲ್ಲಿ ಬೆಳಗಿನ ಅವಧಿಯಲ್ಲಿ 10 ಮತ್ತು ಮಧ್ಯಾಹ್ನ ಬಳಿಕ 10 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುವುದು. 65 ವರ್ಷ ಮೇಲ್ಪಟ್ಟ ವಕೀಲರು ವಾದ ಮಂಡನೆಗೆ ಇಚ್ಛಿಸಿದರೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಲಾಗುವುದು.
ಬಯಸುವ ವಕೀಲರಿಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಲಾಗುವುದು. ವಾದ ಮಂಡಿಸಲಿರುವ ವಕೀಲರನ್ನು ಹೊರತುಪಡಿಸಿ, ಅವರ ಕ್ಲರ್ಕ್‌ಗಳು ಮತ್ತು ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಪ್ರವೇಶವಿಲ್ಲ.
ಎರಡು ವಾರಗಳ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮಾರ್ಗಸೂಚಿ ಮಾರ್ಪಾಡು ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಪ್ರಕಟನೆ ತಿಳಿಸಿದೆ.
ನ್ಯಾಯಾಲಯಗಳು ಸಾಕ್ಷ್ಯಗಳನ್ನೂ ಸಹ ವೀಡಿಯೋ ಕಾನ್ಫರೆನ್ಸ್ ಮೂಲಕವೇ ದಾಖಲಿಸಿಕೊಳ್ಳಬೇಕು, 20ಕ್ಕಿಂತ ಹೆಚ್ಚು ವಕೀಲರು ಕೋರ್ಟ್ ಹಾಲ್ ಒಳಗೆ ಇರುವಂತಿಲ್ಲ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹತ್ತಕ್ಕಿಂತ ಹೆಚ್ಚು ಕೋರ್ಟ್‌ಗಳು ಇರುವ ಕಡೆ, ಜೂ.15ರಿಂದ ಆರಂಭವಾಗುವಂತೆ ಶೇ. 50ರಷ್ಟು ಕೋರ್ಟ್‌ಗಳು ಕಲಾಪ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.