Advertisement

ಕೋವಿಡ್‌ 19: ಆಯುರ್ವೇದ ಚಿಕಿತ್ಸೆ ಯಶಸ್ವಿ

07:31 AM Jul 02, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ವೈರಸ್‌ ಸೋಂಕಿತರಿಗೆ ನೀಡಿದ್ದ ಆಯುರ್ವೇದ ಚಿಕಿತ್ಸೆ ಯಶಸ್ವಿಯಾಗಿದೆ. ಇತರೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರೂ ಸೇರಿ 10 ಸೋಂಕಿತರು ಆಯುರ್ವೇದ ಮಾತ್ರೆಗಳನ್ನು  ಸೇವಿಸಿ ಗುಣಮುಖರಾಗಿದ್ದಾರೆ. ಕೋವಿಡ್‌ 19 ಸೋಂಕಿಗೆ ಆಯುರ್ವೇದ ಔಷಧಗಳನ್ನು ಆಯುರ್ವೇದ ತಜ್ಞ ಡಾ.ಗಿರಿಧರ್‌ ಕಜೆ ಮತ್ತು ತಂಡ ಸಿದ್ಧಪಡಿಸಿತ್ತು.

Advertisement

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್‌ ಟ್ರಯಲ್ಸ್‌ ನಡೆಸಲು  ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಯ ಅಧೀನ ಸಂಸ್ಥೆಯಾದ ಕ್ಲಿನಿಕಲಿ ಟ್ರಯಲ್‌ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ನೀಡಿತ್ತು. ಈ ಹಿನ್ನೆಲೆ ಜೂ.7 ರಿಂದ 25 ರವರೆಗೂ ಈ ಪ್ರಯೋಗ ನಡೆದಿದೆ. 3 ರಿಂದ 9 ದಿನಗಳಲ್ಲಿ  ಎಲ್ಲಾ 10 ಸೋಂಕಿತರು ಗುಣ  ಮುಖರಾಗಿದ್ದು, ಅಂತಿಮವಾಗಿ ನಡೆಸಿದ ಸೋಂಕು ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂದಿದೆ.

ಪ್ರಯೋಗ ಯಶಸ್ವಿಯಾದ ಹಿನ್ನೆಲೆ ಈ ಆಯುರ್ವೇದ ಚಿಕಿತ್ಸೆ ವಿಧಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು  ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವಿಧಾನ ಕುರಿತು ರಾಜೀವ್‌ ಗಾಂಧಿ ಆರೋಗ್ಯ ವಿವಿ ಕುಲಪತಿಗೆ ವರದಿ ನೀಡಲು ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಡಾ.ಗಿರಿಧರ್‌ ಕಜೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 23 ರಿಂದ 65 ವರ್ಷದೊಳಗಿನ 10  ಮಂದಿ ಕೋವಿಡ್‌ 19 ಸೋಂಕಿತರನ್ನು ಆಯುರ್ವೇದ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಮಧುಮೇಹ, ರಕ್ತದೊತ್ತಡ, ಕ್ಷಯರೋಗ ಸಮಸ್ಯೆಯಿಂದ ಬಳಲುತ್ತಿದ್ದವರೂ ಇದ್ದರು. ಜತೆಗೆ ಎಲ್ಲರಿಗೂ ಸೋಂಕು ಲಕ್ಷಣಗಳಿದ್ದವು.

ನಿತ್ಯ ಸೋಂಕಿತರಿಗೆ ನೀಡುವ ಔಷಧಗಳ ಜತೆಗೆ ಇಂತಿಷ್ಟು ಆಯುರ್ವೇದ ಮಾತ್ರೆಗಳನ್ನು ನೀಡಲಾಗಿತ್ತು. 2 ರಿಂದ 4 ದಿನಗಳಲ್ಲಿ ಸೋಂಕು ಲಕ್ಷಣ ಕಡಿಮೆಯಾಯಿತು. 9 ದಿನದಲ್ಲಿ ಎಲ್ಲರೂ ಗುಣಮುಖರಾದರು. ಒಬ್ಬರಿಗೆ ನೀಡುವ ಮಾತ್ರೆಗೆ ಕನಿಷ್ಠ 60 ರೂ. ನಿಂದ ಗರಿಷ್ಠ 180 ರೂ.ನಷ್ಟು ಖರ್ಚಾಗುತ್ತದೆ ಎಂದರು. ಇನ್ನು ಮುಂದಿನ ಹಂತದಲ್ಲಿ ಹೆಚ್ಚಿನ ಸೋಂಕಿತರಿಗೆ ಮತ್ತು ಮುಂಜಾಗ್ರತಾ ದೃಷ್ಟಿಯಿಂದ ಸೋಂಕಿತ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಈ ಔಷಧ  ನೀಡಬಹುದು. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next