Advertisement

ಆತಂಕ ಪಡುವ ಬದಲು ಜಾಗೃತರಾಗಿರಿ

03:26 PM Mar 14, 2020 | Suhan S |

ಕಾರವಾರ: ಕೊರೊನಾ ವೈರಸ್‌ ಹರಡುತ್ತಿರುವುದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ, ಬದಲಾಗಿ ಮುಂಜಾಗೃತಾ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್‌ ಮೌದ್ಗಿಲ್‌ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂಕಿ-ಅಂಶಗಳನ್ನು ಬಿತ್ತರಿಸುತ್ತಿರುವುದು ಜನರನ್ನು ಹೆದರಿಸುವ ಕಾರಣಕ್ಕಲ್ಲ ಎಂದರು. ಸಾರ್ವಜನಿಕರು ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ವೈರಸ್‌ ಹರಡದಂತೇ ತಡೆಯುವುದಕ್ಕಾಗಿ ಎಂದರು. ಹೆಚ್ಚಿನ ಜನಸಂದಣಿ ಸೇರುವ ಸಭೆ-ಸಮಾರಂಭಗಳಲ್ಲಿ ಅನಾವಶ್ಯಕವಾಗಿ ಭಾಗವಹಿಸದೇ, ಕೆಲ ದಿನ ಆದಷ್ಟು ಜಾಗೃತರಾಗಿರುವುದು ಉತ್ತಮ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಕೆ. ಮಾತನಾಡಿ, ಮುಂಜಾಗೃತಾ ಕ್ರಮವಾಗಿ ಸರಕಾರಿ ಕಾರ್ಯಕ್ರಮ ಮುಂದೂಡಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ ಎಂದರು. ಪ್ರತಿಯೊಬ್ಬರು ಆರೋಗ್ಯದ ಹಿತದೃಷ್ಟಿಯಿಂದ 14 ದಿನ ವೈಯಕ್ತಿಕ ಕಡಿವಾಣ ಹಾಕಿಕೊಳ್ಳುವ ಅಗತ್ಯವಿದೆ ಎಂದರು.

ಕುಡಿಯುವ ನೀರು, ಶಿಕ್ಷಣ, ನೆರೆ ಹಾನಿ ಮತ್ತು ಬರ ಪರಿಹಾರ, ಸಪ್ತಪದಿ ಸಾಮೂಹಿಕ ವಿವಾಹ, ಮರಳುಗಾರಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ಹಾಗೂ ಜಿಪಂ ಸಿಇಒ ಎಂ. ರೋಷನ್‌ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್‌ ಮೌದ್ಗಿಲ್‌ ಅವರಿಗೆ ಮಾಹಿತಿ ಸಲ್ಲಿಸಿದರು.

ಡಿಎಚ್‌ಒ ಡಾ| ಜಿ.ಎನ್‌ ಅಶೋಕಕುಮಾರ್‌, ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಕ ಎಂ., ಡಾ| ವಿನೋದ್‌ ಭೂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next