Advertisement

ಕೋವಿಡ್-19 ಜಾಗೃತಿ ಕಾರ್ಯಕ್ರಮ ತೀವ್ರ

11:34 PM May 01, 2020 | Sriram |

ಮಂಗಳೂರು: ಲಾಕ್‌ಡೌನ್‌ ಯಶಸ್ವಿಗೊಳಿಸಲು ಜನರ ಸಹಕಾರ ಅತ್ಯಗತ್ಯ. ಜನರು ಸ್ವಯಂ ಕರ್ಫ್ಯೂಗೊಳಗಾಗಿ, ಕೋವಿಡ್-19 ಸೋಂಕು ತಡೆಗಟ್ಟಲು ಸಹಕರಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

Advertisement

ದ.ಕ. ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆಯ ಆಯ್ದ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಒಗಳೊಂದಿಗೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಅವರು ಮಾತನಾಡಿದರು.

ಡೆಂಗ್ಯೂ, ಮಲೇರಿಯಾ ವ್ಯಾಪಿಸದಂತೆ ಗ್ರಾ.ಪಂ.ಗಳು ಸ್ಥಳೀಯವಾಗಿ ಮುನ್ನೆಚ್ಚರಿಕೆ ವಹಿಸಬೇಕು. ಕೆಲವೆಡೆ ದಿನಸಿ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಜಾಸ್ತಿ ದರ ವಿಧಿಸಿರುವ ಬಗ್ಗೆ ಸಾರ್ವಜನಿಕರ ದೂರುಗಳು ಬರುತ್ತಿವೆ. ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳ ದರಗಳನ್ನು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಗ್ರಾ.ಪಂ.ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಆರೋಗ್ಯ ಸಮೀಕ್ಷಾ ಕಾರ್ಯಗಳಿಗೆ ಆಶಾ ಕಾರ್ಯಕರ್ತರೊಂದಿಗೆ ಸಹಕರಿಸಬೇಕು. 2ನೇ ಹಂತದ ಸಮೀಕ್ಷೆ ನಡೆಯುತ್ತಿದ್ದು, ಇದು ಮಹತ್ವ ಆಗಿದೆ. ಸಾರ್ವಜನಿಕರ ಚಲನವಲನಗಳ ಮಾಹಿತಿ ಅರಿತು, ಆರೋಗ್ಯ ಸಮೀಕ್ಷೆ ಯಶಸ್ವಿಗೊಳ್ಳಲು ಸಹಕರಿಸಬೇಕು ಎಂದು ಸಚಿವ ಕೋಟ ಸೂಚಿಸಿದರು.

ಗ್ರಾ.ಪಂ.ಗಳಲ್ಲಿ ಪಡಿತರ ವಿತರಣೆಯನ್ನು ಪರಿಶೀಲಿಸಿದ ಸಚಿವರು, ಎಪ್ರಿಲ್‌ನಲ್ಲಿ ಪಡಿತರ ವಿತರಣೆ ಯಶಸ್ವಿಯಾಗಿ ನಡೆದಿದೆ. ಕಾರ್ಡ್‌ ಇಲ್ಲದವರಿಗೆ ಅಕ್ಕಿ ಕೊಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು ತಂಡವಾಗಿ ಕೆಲಸ ಮಾಡಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಕೋಟ ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾಣ ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾಣ ರಾಮಚಂದ್ರ ಬಾಯರಿ ಉಪಸ್ಥಿತರಿದ್ದರು.

ಗ್ರಾ.ಪಂ.ಗೆ 20,000 ರೂ. ಅನುದಾನ
ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತ ಕ್ರಮ ಜಾರಿಗೆ ತರಬೇಕು. ಕುಡಿಯುವ ನೀರಿನ ಅಗತ್ಯ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ನೀಡಲಾಗುತ್ತದೆ. ಕೋವಿಡ್  19 ನಿರ್ವಹಣೆಗಾಗಿ ಪ್ರತಿ ಗ್ರಾ.ಪಂ.ಗೆ 20,000 ರೂ. ಅನುದಾನ ನೀಡಲಾಗಿದೆ. ಇದರಲ್ಲಿ ವಿವಿಧ ಜಾಗೃತಿ ಮೂಡಿಸುವ ಕಾರ್ಯವನ್ನು ಹಾಗೂ ಆಶಾ ಕಾರ್ಯಕರ್ತರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಬಹುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next