Advertisement
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಸಮಯದಲ್ಲಿ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ ಬಗ್ಗೆ ಜಾಗೃತಿ ಹಾಗೂ ಪರಿಸರ ಪೊಷಣೆ ಬಗ್ಗೆ ಜಾಗೃತಿ ಕೆಲಸಕ್ಕೆ ಸಂಸ್ಥೆಯ ಉಪನ್ಯಾಸಕರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಸಂಸ್ಥೆಯ ಯೂತ್ ರೆಡ್ ಕ್ರಾಸ್(ವೈ.ಆರ್.ಸಿ.) ಘಟಕದ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ, ಪೋಷಿಸುವ ಮಹತ್ಕಾರ್ಯದಲ್ಲಿ ಈ ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ಪರಿಸರ ಜಾಗೃತಿಗೆ ಎಚ್ಚರಗೊಳ್ಳುವಂತೆ ಕರೆ ನೀಡಿದ್ದಾರೆ. ಈ ಬಗ್ಗೆ ಗಿಡ ನೆಟ್ಟು ಪೋಷಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ ನೀಡಿ, ಇತರರೂ ಕೂಡ ಪರಿಸರ ಜಾಗೃತಿಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡುತ್ತಿದ್ದಾರೆ.
Related Articles
ಸಂಸ್ಥೆಯ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಕೋವಿಡ್ ವೈರಸ್ ಭೀತಿಯಿಂದ ಜನತೆ ಸಾರ್ವಜನಿಕವಾಗಿ ಹೊರ ಬಾರದೇ ಮನೆಯಲ್ಲೇ ಇರುವಂತೆ ತಮ್ಮ ಭಾವಚಿತ್ರದೊಂದಿಗೆ “ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾದ ನಾವು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೂಡದೆ ಸರಕಾರದ ಸೂಚನೆ ಮತ್ತು ನಿಯಮಗಳನ್ನು ಪಾಲಿಸಿ ಮನೆಯಲ್ಲಿಯೇ ಇದ್ದು ನಮ್ಮ ಕುಟುಂಬ ಮತ್ತು ಸಮಾಜದ ರಕ್ಷಣೆಗೆ ಬದ್ಧರಾಗಿದ್ದೇವೆ. ನೀವು.? ಸ್ಟೇ ಹೋಂ ಸ್ಟೇ ಸೇಫ್” ಎಂಬ ಸಂದೇಶದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ, ತಮ್ಮ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿಸಿ ಜಾಗೃತಿ ಮೂಡಿಸುತ್ತಿದ್ದಾರೆ.
Advertisement