Advertisement

ಶಿಕ್ಷಕರಿಂದ ಕೋವಿಡ್ 19 ಜಾಗೃತಿ

10:49 AM Apr 05, 2020 | Suhan S |

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿಜನ ಸಾಮಾನ್ಯರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳ ಜತೆಗೆ ಶಿಕ್ಷಕರು ಫೀಲ್ಡಿಗೆ ಇಳಿಯಲಿದ್ದಾರೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿರುವವರ ಮೇಲೆ ನಿಗಾ ಇಡಲು ರಚಿಸಿರುವ ಪ್ರಾಥಮಿಕ ಸಂಪರ್ಕ ತಂಡ, ದ್ವಿತೀಯ ಸಂಪರ್ಕ ತಂಡದಲ್ಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ಗ್ರಾಮೀಣ ಭಾಗದಲ್ಲೂ ಆರೋಗ್ಯ ಇಲಾಖೆ ಸಹಿತ ವಿವಿಧ ಇಲಾಖೆ ಅಧಿಕಾರಿಗಳ ಜತೆ ಶಿಕ್ಷಕರೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕೆಂಬ ಸಂದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನೆಲ್ಲಾ ಜಿಲ್ಲಾ ಉಪನಿರ್ದೇಶಕರ ಮೂಲಕ ಶಿಕ್ಷಕರಿಗೆ ರವಾನಿಸಿದೆ.

ಪ್ರಾಥಮಿಕ-ಪ್ರೌಢಶಾಲೆಯಲ್ಲಿ 2 ಲಕ್ಷಕ್ಕೂ ಅಧಿಕ ಶಿಕ್ಷಕರಿದ್ದು ಈ ಪೈಕಿ ಶೇ.40 ಶಿಕ್ಷಕರು, ಶೇ.60 ಶಿಕ್ಷಕಿಯರು ಎಂಬ ಅಂಕಿ -ಅಂಶಗಳನ್ನು ಈ ಹಿಂದೆಯೇ ಇಲಾಖೆ ನೀಡಿತ್ತು. ಎಲ್ಲಾ ಶಾಲೆಗಳಿಗೂ ಸದ್ಯ ರಜೆ ನೀಡಲಾಗಿದೆ. ಜತೆಗೆ 1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಪರೀಕ್ಷೆ ರದ್ದು ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲು ಆದೇಶ ಹೊರಡಿಸಲಾಗಿದೆ.

ಕೆಲ ಶಾಲೆಗಳಲ್ಲಿ ಬಿಸಿಯೂಟದ ಆಹಾರ ಪದಾರ್ಥ ವಿತರಣೆ ಕಾರ್ಯ ಆರಂಭವಾಗಿದೆ. ಹೀಗಾಗಿ ಶಾಲಾ ಮುಖ್ಯ ಶಿಕ್ಷಕರು, ಕೆಲವು ಸಹ ಶಿಕ್ಷಕರು ಈ ಕಾರ್ಯದಲ್ಲಿದ್ದಾರೆ. ಇದರ ಹೊರತಾಗಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಇದ್ದಾರೆ. ಇವರಲ್ಲಿ 50 ವರ್ಷ ಮೇಲ್ಪಟ್ಟವರು, ಆರೋಗ್ಯ ಸಮಸ್ಯೆ ಹೊಂದಿರುವವರು, ಕೋವಿಡ್ 19  ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಹೊರತುಪಡಿಸಿ, ಉಳಿದ ಶಿಕ್ಷಕರನ್ನು ಕೊರೊನಾ ಜಾಗೃತಿಗೆ ಬಳಸಿಕೊಳ್ಳಲು ಉಪನಿರ್ದೇಶಕರ ಮೂಲಕ ಸೂಚನೆ ನೀಡಿದೆ.

ಕೋವಿಡ್ 19  ವಿರುದ್ಧ ಹೋರಾಟದಲ್ಲಿ ಶಿಕ್ಷಕರು ಬೇರೆ ಬೇರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಜತೆ ಸೇರಿ ಸೇವೆ ಸಲ್ಲಿಸಲಿದ್ದಾರೆ. ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸ್ಥಳೀಯಾಡಳಿಗಳ ಸೂಚನೆ ಮೇರೆಗೆ ನಡೆಸಲಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

 ಶಿಕ್ಷಕರಿಗೆ ಏನೇನು ಕೆಲಸ?: ಶಿಕ್ಷಕರಿಗೆ ಸೂಚಿಸಿದ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯ. ಆ ಪ್ರದೇಶದ ಕುಡಿವ ನೀರು, ಆಹಾರ ಪದಾರ್ಥ, ದಿನಸಿ, ಸ್ವಚ್ಛತೆ, ಆರೋಗ್ಯ ಸಮಸ್ಯೆ ಸಹಿತವಾಗಿ ವಿವಿಧ ಸಮಸ್ಯೆಗಳ ಕುರಿತ ಜನ ಸಾಮಾನ್ಯರ ಅಹವಾಲು ಸ್ವೀಕರಿಸುವುದು, ಈ ಅಹವಾಲುಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿ, ಅಭಿಯಂತರರು, ಗ್ರಾಮ ಲೆಕ್ಕಿಗರು, ಆಶಾ ಕಾರ್ಯಕರ್ತೆಯರು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು. ಆ ಪ್ರದೇಶದ ಹಿರಿಯ ನಾಗರಿಕರಿಗೆ ಅಗತ್ಯವಿರುವ ವೈದ್ಯಕೀಯ ಸೇವೆ, ಅಗತ್ಯ ಔಷಧಿಗಳ ಪೂರೈಕೆ, ತುರ್ತು ಆರೋಗ್ಯ ಸಮಸ್ಯೆಗೆ ಸ್ಪಂದಿಸಬೇಕು. ಸರ್ಕಾರ ಘೋಷಿಸಿರುವ ಹಲವಾರು ಯೋಜನೆ ಜನರಿಗೆ ತಲುಪಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಲು ನಿರ್ದೇಶನ ನೀಡಲಾಗಿದೆ.

 

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next