Advertisement
ಐದು ರಾಜ್ಯಗಳಲ್ಲಿ ದೇಶದ 71 ಪ್ರತಿಶತ ಪ್ರಕರಣಗಳು!
ಇಂದು ಕೋವಿಡ್-19 ದೇಶದ ಐದು ರಾಜ್ಯಗಳಿಗೇ ಹೆಚ್ಚಾಗಿ ಬಾಧಿಸುತ್ತಿದ್ದು, ಸೋಮವಾರದ ವೇಳೆಗೆ ಈ ಐದು ರಾಜ್ಯಗಳಲ್ಲೇ ದೇಶದ 70.87 ಪ್ರತಿಶತ ಪ್ರಕರಣಗಳು ದಾಖಲಾಗಿವೆ. ಜೂನ್ 1ರ ಅಪರಾಹ್ನದ 3 ಗಂಟೆಯ ವೇಳೆಗೆ ಮಹಾರಾಷ್ಟ್ರದಲ್ಲಿ 67,655, ತಮಿಳುನಾಡು(22,333), ದಿಲ್ಲಿ (19,844), ಗುಜರಾತ್(16,794), ರಾಜಸ್ಥಾನದಲ್ಲಿ 8,980 ಪ್ರಕರಣಗಳು ಪತ್ತೆಯಾಗಿವೆ.
ಭಾರತ ಎರಡನೇ ಸ್ಥಾನದಲ್ಲಿ
ಸೋಂಕಿತರ ಸಂಖ್ಯೆಯಲ್ಲಿ ಭಾರತ 7ನೇ ಸ್ಥಾನದಲ್ಲಿದ್ದರೂ, ಗಂಭೀರ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ 17 ಸಾವಿರಕ್ಕೂ ಅಧಿಕ ರೋಗಿಗಳ ಸ್ಥಿತಿ ಗಂಭೀರವಾಗಿದ್ದರೆ, ಭಾರತದಲ್ಲಿ ಗಂಭೀರ ಸ್ಥಿತಿಯಲ್ಲಿರುವವರ ಸಂಖ್ಯೆ ಸೋಮವಾರ ಮಧ್ಯಾಹ್ನದ ವೇಳೆಗೆ 8,944ಕ್ಕೇರಿದೆ. ಈ ವಿಚಾರದಲ್ಲಿ ಭಾರತದ ನಂತರ ಬ್ರೆಜಿಲ್ ಇದ್ದು ಅಲ್ಲಿ 8318 ಜನರಲ್ಲಿ ರೋಗ ಉಲ್ಬಣಿಸಿದೆ. ನಿರ್ಬಂಧ ಸಡಿಲಿಕೆ
ಈಗಲೇ ಬೇಡವಾಗಿತ್ತೇ?
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಉತ್ತುಂಗಕ್ಕೆ ಏರಿಲ್ಲ, ಹೀಗಾಗಿ, ಅದಕ್ಕೂ ಮುನ್ನವೇ ಲಾಕ್‌ಡೌನ್ ನಿರ್ಬಂಧಗಳಲ್ಲಿ ಬಹುತೇಕ ಸಡಿಲಿಕೆ ತಂದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದೇ ಎನ್ನುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಏಮ್ಸ್‌ನ ವೈದ್ಯಕೀಯ ಸಂಶೋಧನ ತಂಡವೊಂದು ಅಧ್ಯಯನ ವರದಿ ಬಿಡುಗಡೆಗೊಳಿಸಿದ್ದು, “”ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಉತ್ತುಂಗಕ್ಕೇರಿ- ಇಳಿದ ಮೇಲೆ ಕೆಲವು ವಾರಗಳ ಅನಂತರ ನಿರ್ಬಂಧಗಳನ್ನು ಸಡಿಲ ಮಾಡುವುದೇ ಸರಿ. ಹೀಗೆ ಮಾಡಿದರೆ ಮಾತ್ರ, ಲಾಕ್‌ಡೌನ್‌ನ ನಿಜವಾದ ಪ್ರಯೋಜನಗಳನ್ನು ಪಡೆಯಬಹುದು” ಎನ್ನುತ್ತದೆ.
Related Articles
Advertisement
ಹಲವು ರಾಷ್ಟ್ರಗಳಿಗಿಂತ ಮಹಾರಾಷ್ಟ್ರದಲ್ಲೇ ಹೆಚ್ಚು ಸೋಂಕಿತರು
ದೇಶದಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಕೋವಿಡ್-19 ಸೋಂಕಿತರನ್ನು ಹೊಂದಿದ್ದು, 65 ಸಾವಿರಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದರೆ, ಇವರಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರಮುಖ ದೇಶಗಳಲ್ಲಿ ಮಹಾರಾಷ್ಟ್ರಕ್ಕಿಂತಲೂ ಕಡಿಮೆ ಸೋಂಕಿತರಿದ್ದಾರೆ. ಉದಾಹರಣೆಗೆ ಬೆಲ್ಜಿಯಂ, ಕತಾರ್, ಬಾಂಗ್ಲಾದೇಶ, ನೆದರ್‌ಲ್ಯಾಂಡ್ಸ್, ಸ್ವೀಡನ್, ಸಿಂಗಾಪುರ್, ಯುಎಇ, ದಕ್ಷಿಣ ಆಫ್ರಿಕಾ, ಸ್ವಿಟ್ಸರ್‌ಲ್ಯಾಂಡ್, ಇಂಡೋನೇಶ್ಯಾ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಮಹಾರಾಷ್ಟ್ರಕ್ಕಿಂತಲೂ ಕಡಿಮೆಯಿದೆ! ಕೇವಲ ಮುಂಬಯಿಯ ಒಂದರಲ್ಲೇ ಜೂನ್ 1, ಅಪರಾಹ್ನ 3 ಗಂಟೆಯ ವೇಳೆಗೆ 39,686 ಪ್ರಕರಣಗಳು ಪತ್ತೆಯಾಗಿವೆ!