ಚಿಕ್ಕಬಳ್ಳಾಪುರ: ಮಹಾಮಾರಿ ಕೋವಿಡ್-19 ಜಿಲ್ಲೆಯ ಪಾಲಿಗೆ ಎರಡು ದಿನಗಳಿಂದ ಆಶಾದಾಯಕ ಬೆಳವಣಿಗೆ ಮೂಡಿಸಿದ್ದು, ಶನಿವಾರ ಹಾಗೂ ಭಾನುವಾರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದೇ ಇರು ವುದು ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 17 ಮಂದಿ ಸೋಂಕಿತರು ಸಂಪೂರ್ಣ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಛಾರ್ಜ್ ಆಗಿದ್ದಾರೆ.
ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈ ವಲಸಿಗರ ಆಗಮನದ ಬಳಿಕ ಕೇವಲ 26ಕ್ಕೆ ಸೀಮಿತ ವಾಗಿದ್ದ ಸೋಂಕಿತರ ಸಂಖ್ಯೆ 136ಕ್ಕೆ ಏರಿತ್ತು. ಆದರೆ ಎರಡು, ಮೂರು ದಿನಗಳಿಂದ ಜಿಲ್ಲೆ ಯಲ್ಲಿ ಹೊಸ ಪ್ರಕರಣ ಕಂಡು ಬರದೇ ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.
17 ಮಂದಿ ಬಿಡುಗಡೆ: ಕಳೆದ ಹಲವು ದಿನಗಳಿಂದ ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್-19 ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ಮಂದಿ ವಲಸೆ ಕಾರ್ಮಿಕರು ಸೋಂಕಿನಿಂದ ಚೇತರಿಕೆ ಕಂಡು ಮನೆಗೆ ತೆರಳಿದ್ದಾರೆ. ಆ ಪೈಕಿ 5 ಮಂದಿ ಬಾಗೇಪಲ್ಲಿ ಹಾಗೂ 12 ಮಂದಿ ಗೌರಿ ಬಿದನೂರು ತಾಲೂಕಿಗೆ ಸೇರಿದವಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಸಕ್ರಿಯವಾಗಿರುವ ಸೋಂಕಿತರ ಸಂಖ್ಯೆ 136 ರಿಂದ 98ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಆರಂಭದಲ್ಲಿ ಕೋವಿಡ್ 19 ಏರುಗತಿಯಲ್ಲಿ ಸಾಗಿದರೂ ಬಳಿಕ ನಿಯಂ ತ್ರಣದಲ್ಲಿತ್ತು. ಆದರೆ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಬಳಿಕ ಮುಂಬೈನಿಂದ ಆಗಮಿಸಿದ 316 ಮಂದಿ ಪೈಕಿ 105 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಬರೀ ಮೂರು ದಿನಲ್ಲಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 26 ರಿಂದ 136ಕ್ಕೆ ಏರಿಕೆ ಕಾಣುವಂತಾಯಿತು. ಸದ್ಯ ಮುಂಬೈನಿಂದ ಆಗಮಿಸಿರುವ ಮೂರು ಮಂದಿಯ ವರದಿ ಮಾತ್ರ ಬಾಕಿ ಇದೆ.
1,871 ಮಂದಿ ಮೇಲೆ ನಿಗಾ: ಜಿಲ್ಲೆಯಲ್ಲಿ 136 ಕೋವಿಡ್ 19 ಸೋಂಕಿತರ ಪ್ರಕರಣಗಳ ಪೈಕಿ ಇದುವರೆಗೂ 38 ಮಂದಿ ಗುಣಮುಖರಾಗಿದ್ದು, ಉಳಿದ 98 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರ ನಡುವೆ ಜಿಲ್ಲೆಯಲ್ಲಿ ಇದುವರೆಗೂ ಕಾಣಿಸಿಕೊಂಡಿರುವ 136 ಕೋವಿಡ್ 19 ಸೋಂಕಿತರ ಪೈಕಿ ಅವರ ಸಂಪರ್ಕಕ್ಕೆ ಬಂದಿದ್ದ ಒಟ್ಟು 1,671 ಮಂದಿ ಸೇರಿ ಒಟ್ಟು 1,871 ಮಂದಿ ಮೇಲೆ ಆರೋಗ್ಯ ಇಲಾಖೆ ಅವಲೋಕನದಲ್ಲಿ ಇರಿಸಿದೆ.
ಈಗಾಗಲೇ 1,144 ಮಂದಿ 28 ದಿನಗಳ ಅವಲೋಕನ ಪೂರೈಸಿದ್ದಾರೆ. 489 ಮಂದಿ 14 ದಿನಗಳ ಅವಲೋಕನ ಪೂರೈಸಿದ್ದು ಉಳಿದ 238 ಮಂದಿ 14 ದಿನಗಳ ಅವಲೋಕನದಲ್ಲಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಮಾಹಿತಿ ನೀಡಿದ್ದಾರೆ.