Advertisement

ಕೋವಿಡ್- 19 ನಿಯಂತ್ರಣಕ್ಕೆ ಕ್ರಮ, ಜನಜೀವನ ಭಾಗಶಃ ಸ್ತಬ್ಧ

12:43 AM Mar 22, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ ಒಟ್ಟು ಎಂಟು ಮಂದಿಗೆ ಕೋವಿಡ್- 19 ತಟ್ಟಿರುವ ಹಿನ್ನೆಲೆಯಲ್ಲಿ ಬಿಗು ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಜಿಲ್ಲೆ ಯಲ್ಲಿ ಜನಜೀವನ ಭಾಗಶ: ಸ್ತಬ್ದಗೊಂಡಿದೆ. ಅಂಗಡಿ, ಹೊಟೇಲುಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ವರೆಗೆ ಮಾತ್ರವೇ ತೆರೆಯಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಿಕೋ ಎನ್ನುತ್ತಿತ್ತು. ಬೆಳಗ್ಗಿನ ಜಾವ ತೆರೆದಿದ್ದ ಕೆಲವೊಂದು ಹೊಟೇಲ್‌, ಅಂಗಡಿಗಳನ್ನು ಜಿಲ್ಲಾಧಿಕಾರಿಗಳೇ ನೇತೃತ್ವ ವಹಿಸಿ ಮುಚ್ಚಿಸಿದರು.

Advertisement

ಅಂಗಡಿ, ಹೊಟೇಲ್‌ಗ‌ಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ತನಕ ಮಾತ್ರ ತೆರೆಯಲಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಸರಕಾರದ ಆದೇಶಗಳನ್ನು ಉಲ್ಲಂಘಿಸುವವರಿಗೆ ಐಪಿಸಿ ಆ್ಯಕ್ಟ್ 188 ಸೆಕ್ಷನ್‌ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಸಹಿತ ಬಹುತೇಕ ಪೇಟೆಗಳಲ್ಲಿ ಬೆಳಗ್ಗಿನ ಜಾವ ಅಂಗಡಿ, ಹೊಟೇಲ್‌ಗ‌ಳು ತೆರೆಯಲಿಲ್ಲ. ತೆರೆದ ಹೊಟೇಲ್‌, ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

ಕೋವಿಡ್- 19 ನಿಯಂತ್ರಣದ ಅಂಗವಾಗಿ ಈ ಆದೇಶದಿಂದಾಗಿ ಕೆಲವು ಅಂಗಡಿ ಹೊಟೇಲ್‌ಗ‌ಳು 11 ಗಂಟೆಯ ಬಳಿಕವೂ ತೆರೆಯದೆ ಸರಕಾರದೊಂದಿಗೆ ಪೂರ್ಣ ಸಹಕಾರ ನೀಡಿದರು. ಜಿಲ್ಲೆಯ ಎಲ್ಲೆಡೆ ಕಟ್ಟೆಚ್ಚರ ಪಾಲಿಸಲಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ, ಗಡಿ ಪ್ರದೇಶಗಳಲ್ಲಿ ಪೊಲೀಸರು, ಆರೋಗ್ಯ ಇಲಾಖೆಯ ಸಿಬಂದಿಗಳು ವಾಹನ ಪ್ರಯಾಣಿಕರನ್ನು ತಪಾಸಣೆ ನೀಡಿದ ಬಳಿಕವೇ ಮುಂದೆ ಸಾಗಲು ಅವಕಾಶ ನೀಡುತ್ತಿದ್ದಾರೆ. ವಾಹನ ಪ್ರಯಾಣಿಕರಲ್ಲಿ ಶಂಕೆ ಕಂಡು ಬಂದಲ್ಲಿ ತತ್‌ಕ್ಷಣವೇ ಕಾಸರಗೋಡು ನಗರದ ಜನರಲ್‌ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಕಟ್ಟು ನಿಟ್ಟಿನ ಆದೇಶದಿಂದಾಗಿ ನಗರ ಹಾಗು ಪೇಟೆ ಪ್ರದೇಗಳಲ್ಲಿ ಜನರ ಓಡಾಟ ಕಡಿಮೆಯಾಗಿದೆ. ಅಂಗಡಿ- ಮುಂಗಟ್ಟುಗಳಲ್ಲಿ ವ್ಯಾಪಾರವೂ ಕಡಿಮೆಯಾಗಿದೆ. ಜನರು ವಿರಳವಾಗಿರುವುದರಿಂದ 20 ಶೇ.ಕ್ಕೂ ಅಧಿಕ ಹೊಟೇಲ್‌ಗ‌ಳು ಮುಚ್ಚಲಾಗಿದೆ. ಹೊಟೇಲ್‌ಗ‌ಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಒಂದು ವಾರ ಬಿಟ್ಟು ಬರುವಂತೆ ಕೆಲವು ಹೊಟೇಲ್‌ ಮಾಲಕರು ತಿಳಿಸಿದ್ದಾರೆ. ಇನ್ನೂ ಕೆಲವು ಹೊಟೇಲ್‌ಗ‌ಳು ಹೊಸ ಆದೇಶ ಬರುವ ತನಕ ಹೊಟೇಲ್‌ಗ‌ಳನ್ನು ಮುಚ್ಚಲು ತೀರ್ಮಾನಿಸಿದ್ದಾರೆ.

ಈಗಾಗಲೇ ಶೇ.20 ರಷ್ಟು ರಾಜ್ಯ ಸಾರಿಗೆ ಬಸ್‌ಗಳ ಓಡಾಟ ರದ್ದುಪಡಿಸಲಾಗಿದೆ. ಸರ್ವೀಸ್‌ ನಡೆಸುವ ಬಸ್‌ಗಳಲ್ಲೂ ಪ್ರಯಾಣಿಕರು ವಿರಳವಾಗಿದ್ದಾರೆ. ಖಾಸಗಿ ಬಸ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಕಾಸರಗೋಡು ನಗರದಿಂದ ಹೊರಡು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ಬಹಳಷ್ಟು ಕಡಿಮೆಯಾಗಿದ್ದು, ನಷ್ಟದಲ್ಲಿ ಸಾಗುತ್ತಿದೆ ಎಂದು ಬಸ್‌ ಮಾಲಕರು ತಿಳಿಸುತ್ತಿದ್ದಾರೆ. ಲಾಡ್ಜ್ಗಳಲ್ಲೂ ಜನರು ವಿರಳವಾಗಿದ್ದು, ಎಲ್ಲಾ ಕೊಠಡಿಗಳು ಖಾಲಿ ಬಿದ್ದಿವೆ. ಇದರಿಂದಾಗಿ ಲಾಡ್ಜ್ ನಡೆಸುವವರು ಸಮಸ್ಯೆಗೆ ಬಿದ್ದಿದ್ದಾರೆ.

Advertisement

ಕಟ್ಟುನಿಟ್ಟಿನ ಆದೇಶ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಆರು ಮಂದಿಗೆ ಕೋವಿಡ್‌-19 ಖಚಿತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಯಂತ್ರಣಗಳನ್ನು ಹೇರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ.

ಆದೇಶಗಳನ್ನು ಉಲ್ಲಂಘಿಸುವವರಿಗೆ 1897 ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2 (1) ಯ ಪ್ರಕಾರ ಕಠಿಣ ಕ್ರಮಕೈಗೊಳ್ಳಲು ಕಾಸರಗೋಡು ಜಿಲ್ಲಾದಿಕಾರಿಗೂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಪೂರ್ಣ ಅಧಿಕಾರ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳೂ, ಇನ್ನಿತರ ಸಾರ್ವಜನಿಕ, ಖಾಸಗಿ ಕಚೇರಿಗಳೂ ಒಂದು ವಾರ ಕಾಲ ಮುಚ್ಚಲಾಗುವುದು.

ಅಂಗಡಿ, ಹೊಟೇಲ್‌ಗ‌ಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ತನಕ ಮಾತ್ರ ತೆರೆಯಲಿದೆ. (ಅಗತ್ಯ ಸೇವೆಗಳನ್ನು ಹೊರತುಪಡಿಸಲಾಗಿದೆ)

ಎರಡು ವಾರಗಳ ಕಾಲ ಎಲ್ಲಾ ಆರಾಧನಾಲಯಗಳನ್ನು ಮುಚ್ಚಬೇಕು.

ಎಲ್ಲಾ ಕ್ಲಬ್‌ಗಳು, ಸಿನೇಮಾ ಥಿಯೇಟರ್‌ಗಳು 2 ವಾರಗಳ ಕಾಲ ಕಾರ್ಯಾಚರಿಸಬಾರದು.

ಪಾರ್ಕ್‌, ಬೀಚ್‌ ಮುಂತಾದೆಡೆಗಳಲ್ಲಿ ಜನರ ಗುಂಪು ಸೇರಬಾರದು.

ಸರಕಾರಿ ಕಚೇರಿಗಳು ಮುಚ್ಚಿದರೂ ಸರಕಾರಿ ನೌಕರರು ಜಿಲ್ಲೆ ಬಿಟ್ಟು ಹೊರಹೋಗುವಂತಿಲ್ಲ.

ಜಿಲ್ಲಾ ಅಧಿಕಾರಿಗಳು ನಿರ್ದೇಶಿಸುವಾಗ ಸರಕಾರಿ ಕಚೇರಿಗೆ ತೆರಳಲು ಸರಕಾರಿ ನೌಕರರು ಸನ್ನದ್ಧರಾಗಬೇಕು.

ಮೇಲ್ಕಾಣಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸುವವರಿಗೆ ಐಪಿಸಿ ಆ್ಯಕ್ಟ್ 188 ಸೆಕ್ಷನ್‌ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗು ವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next