Advertisement

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

11:33 AM Aug 09, 2020 | sudhir |

ಹೊಸದಿಲ್ಲಿ: ದೇಶಾದ್ಯಂತ ಈವರೆಗೆ 196 ಮಂದಿ ವೈದ್ಯರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಹೇಳಿದೆ. ಜತೆಗೆ, ಈ ಕುರಿತು ಗಮನ ಹರಿಸುವಂತೆ ಪ್ರಧಾನಿ ಮೋದಿ ಅವರಿಗೆ ಸಂಸ್ಥೆ ಮನವಿ ಮಾಡಿದೆ. ನಾವು ಸಂಗ್ರಹಿಸಿರುವ ಮಾಹಿತಿ ಪ್ರಕಾರ, 196 ವೈದ್ಯರನ್ನು ನಾವು ಕಳೆದುಕೊಂಡಿದ್ದೇವೆ. ಈ ಪೈಕಿ 170 ಮಂದಿ 50 ವರ್ಷ ಮೇಲ್ಪಟ್ಟವರು ಹಾಗೂ ಜನರಲ್‌ ಪ್ರಾಕ್ಟೀಷನರ್‌ಗಳು. ಜ್ವರ ಮತ್ತಿತರ ರೋಗ ಲಕ್ಷಣ ಕಂಡುಬಂದಾಗ ಎಲ್ಲರೂ ಮೊದಲು ಇಂಥ ವೈದ್ಯರ ಬಳಿ ಧಾವಿಸುತ್ತಾರೆ. ಹೀಗಾಗಿ ವೈದ್ಯರು ಬೇಗ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ, ದಯವಿಟ್ಟು ವೈದ್ಯರು ಮತ್ತವರ ಕುಟುಂಬಗಳಿಗೆ ಹೆಚ್ಚು ಸುರಕ್ಷತೆ ಕಲ್ಪಿಸಬೇಕು, ಸರಕಾರಿ ಪ್ರಾಯೋಜಿತ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯಗಳನ್ನು ಎಲ್ಲ ವಲಯದ ವೈದ್ಯರಿಗೂ ಕಲ್ಪಿಸಬೇಕು ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಐಎಂಎ ಕೋರಿದೆ.

Advertisement

ಒಂದೇ ದಿನ 61,537 ಪ್ರಕರಣ ಪತ್ತೆ: ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ 61,537 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. 933 ಮಂದಿ ಸೋಂಕಿತರು ಅಸುನೀಗಿದ್ದು, ಮೃತರ ಸಂಖ್ಯೆ 42,500 ದಾಟಿದೆ. ಇದೇ ವೇಳೆ, ಗುಣಮುಖ ಪ್ರಮಾಣ ಶೇ. 68.32ಕ್ಕೇರಿದ್ದು, 14.27 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಕೆ ಕಂಡು ಮನೆಗೆ ಮರಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕರ್ನಾಟಕದಲ್ಲೂ ಮರಣ ಪ್ರಮಾಣ ಅಧಿಕ
ಕರ್ನಾಟಕ ಸೇರಿದಂತೆ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 13 ಜಿಲ್ಲೆಗಳಲ್ಲಿ ಕೋವಿಡ್ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದು, ಪರೀಕ್ಷಾ ಪ್ರಮಾಣ ಹೆಚ್ಚಳ ಮಾಡುವಂತೆ ಹಾಗೂ ಪರೀಕ್ಷಾ ವರದಿಯನ್ನು ಬೇಗನೆ ನೀಡುವಂತೆ ಸೂಚಿಸಲಾಗಿದೆ. ಇದೇ ವೇಳೆ, ಕೆಲವು ಪ್ರದೇಶಗಳಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳಲ್ಲೇ ಸೋಂಕಿತರು ಸಾವಿಗೀಡಾಗುತ್ತಿರುವ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ರೋಗ ಪತ್ತೆ ಮತ್ತು ಆಸ್ಪತ್ರೆ ದಾಖಲಾತಿಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವಾಲಯ ನಿರ್ದೇಶಿಸಿದೆ. ಕರ್ನಾಟಕ, ತಮಿಳು ನಾಡು, ಗುಜರಾತ್‌ ಹಾಗೂ ತೆಲಂಗಾಣಗಳ 16 ಜಿಲ್ಲೆಗಳ ಅಧಿಕಾರಿಗಳ ಜತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ವರ್ಚುವಲ್‌ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next