Advertisement

ಕೋವಿಡ್‌ 3ನೇ ಅಲೆ: ಜನರ ನಿರ್ಲಕ್ಷ್ಯ

03:55 PM Aug 04, 2021 | Team Udayavani |

ರಾಮನಗರ: ಕೋವಿಡ್‌ 3ನೇ ಅಲೆಯ ಭೀತಿಯನ್ನು ರಾಜ್ಯ ಎದುರಿಸುತ್ತಿದೆ. ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ರಾಮನಗರ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದನ್ನೇ ಮರೆತಿದ್ದಾರೆ. ಪೊಲೀ ಸರು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯ ಮನವಿಗೆ ಸಾರ್ವಜನಿಕರು ಕವಡೆ ಕಾಸಿನ ಬೆಲೆಯನ್ನು ಕೊಡುತ್ತಿಲ್ಲ.

Advertisement

ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ವ್ಯಾಪಾರಿ ಮಳಿಗೆಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆಯನ್ನು ಜನರು ಪಾಲಿಸುತ್ತಿಲ್ಲ. ಎಪಿಎಂಸಿಯ ತರಕಾರಿ, ಹೂ ಮಾರಾಟ ಮಾರುಕಟ್ಟೆಗಳು, ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಕೋವಿಡ್‌ ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ. ಪ್ರಮುಖ ಹೋಟೆಲ್‌ಗ‌ಳಲ್ಲಿ ಸಿಬ್ಬಂದಿ ಮಾಸ್ಕ್ ಧರಿಸದೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದ ನಿಷೇಧವಿದ್ದರೂ ಕೆಲವು ದೇವಾಲಯಗಳಲ್ಲಿ ಇವೆಲ್ಲವೂ ನಡೆಯುತ್ತಿದೆ. ಬಸ್‌ಗಳಲ್ಲಿಮಾಸ್ಕ್ ಧರಿಸದಿದ್ದರೂ ಕೇಳುವವರಿಲ್ಲ. ಬಹುತೇಕ ಎಲ್ಲಾ ಬ್ಯಾಂಕುಗಳ ಹೊರಗೆ ನೂರಾರು ಜನ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಅಲ್ಲಿ ದೈಹಿಕ ಅಂತರಕ್ಕೆ ಪ್ರಾಮುಖ್ಯತೆ ಇಲ್ಲ, ಮಾಸ್ಕ್ ಧರಿಸಿ ಎಂದು ಹೇಳುವವರಿಲ್ಲ. ಬ್ಯಾಂಕುಗಳ ಸೆಕ್ಯೂರಿಟಿಗಳು ಇವೆಲ್ಲವನ್ನು ವಿಚಾರಿಸುವ ಗೋಜಿಗೆ ಹೋಗುತ್ತಿಲ್ಲ.

ಸೂಚನಾ ಫ‌ಲಕಗಳು ತೋರಿಕೆ ಮಾತ್ರ: ಮಾಸ್ಕ್ ಧರಿಸದಿದ್ದರೆ ವಹಿವಾಟು ಇಲ್ಲ, ಪ್ರವೇಶವಿಲ್ಲ ಎಂಬ ಸೂಚನಾ ಫ‌ಲಕಗಳು ವಾಣಿಜ್ಯ ಮಳಿಗೆಗಳ ಮುಂಭಾಗ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಮುಂಭಾಗ ರಾರಾಜಿಸುತ್ತಿವೆ. ಆದರೆ, ಅವೆಲ್ಲ ತೋರಿಕೆಗೆ ಮಾತ್ರ. ಸರ್ಕಾರಿ ಕಚೇರಿಗಳಲ್ಲಿ ಪ್ರಮುಖ ಅಧಿಕಾರಿಗಳು ಮಾತ್ರ ಮಾಸ್ಕ್ ಧರಿಸಿದವರೊಂದಿಗೆ ಮಾತ್ರ ಮಾತನಾಡುವುದುಕಂಡು ಬಂತು.

ಕಾಟಾಚಾರದ ಮಾಸ್ಕ್ ಧರಿಸುವಿಕೆ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಜನತೆ ಕಾಟಾಚಾರಕ್ಕೆ ಮಾಸ್ಕ್ ಧರಿಸುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರು,ನಗರಸಭೆ ಸಿಬ್ಬಂದಿ ಮಾಸ್ಕ್ ಧರಿಸದೆ ಅಡ್ಡಾಡುವ ನಾಗರಿಕರಿಗೆ ದಂಡ ವಿಧಿಸಲು ಮುಂದಾದಗಲೆಲ್ಲ, ಅವರ ವಿರುದ್ಧ ವಾಗ್ಧಾಳಿ ನಡೆಸುವವರೆ ಹೆಚ್ಚು.ಕೆಲವುಕಚೇರಿಗಳಲ್ಲಿ ಮಾಸ್ಕ್ ಧರಿಸಿ, ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಿ ಎಂದು ಅಲ್ಲಿನ ಸಿಬ್ಬಂದಿಗಳ ಸೂಚನೆಗಳಿಗೆ ಗೌರವ ಕೊಡದೆ ಅನಾಗರಿಕ ರಂತೆ ವರ್ತಿಸುವ ಜನರಿಗೂ ಕಡಿಮೆ ಏನಿಲ್ಲ. “ನಾನು ಎರಡು ಡೋಸ್‌ ವ್ಯಾಕ್ಸಿನ್‌ ಪಡೆದಿದ್ದೇನೆ ನನಗೆ ಸೋಂಕು ತಾಗುವುದಿಲ್ಲ, ಹರಡವುದೂ ಇಲ್ಲ” ಎಂಬ ಉದ್ದಟತನದ ಮಾತುಗಳಿಗೆ ಕಡಿಮೆ ಏನಿಲ್ಲ.

ಅಧಿಕಾರಿಗಳ ಸಭೆಗಳು ನಿರಂತರ!: ಕೋವಿಡ್‌ ಸೋಂಕು ಹೊರಟು ಹೋಗಿದೆ ಎಂದು ಸಾರ್ವಜನಿಕರ ಭ್ರಮೆಯ ನಡುವೆ ಸರ್ಕಾರದ ಸೂಚನೆಗಳ ಪ್ರಕಾರ ಜಿಲ್ಲೆಯಲ್ಲಿಕೋವಿಡ್‌ ವಿಚಾರದಲ್ಲಿ ಸಭೆಗಳಿಗೆ ಕೊರತೆ ಏನಿಲ್ಲ. ದಿನನಿತ್ಯ ಕೋವಿಡ್‌ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ಈ ವಿಚಾರದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಸಿ.ಎನ್‌.ಅಶ್ವಥನಾರಾಯಣ
ಅವರು ಪದೇ ಪದೆ ವೀಡಿಯೋ ಕಾನ್ಪರೆನ್ಸ್‌ ನಡೆಸಿ, ಅಧಿಕಾರಿಗಳ ಬಳಿ ಕೋವಿಡ್‌ ವಿಚಾರದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದರು. ಈಗ ಅವರ ನಿರ್ಗಮನದ ನಂತರ ಶಾಸಕರು ತಮ್ಮ ವ್ಯಾಪ್ತಿಯ ಅಧಿಕಾರಿಗಳ ಬಳಿ ನಿರಂತರ ಮಾಹಿತಿ ಕಲೆಹಾಕುವ ಕೆಲಸ ಮಾಡುತ್ತಿಲ್ಲ
ಎಂಬ ಆರೋಪಗಳುಕೇಳಿ ಬರುತ್ತಿವೆ.

Advertisement

ಇದನ್ನೂ ಓದಿ:ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

ಕೋವಿಡ್‌ ಲಸಿಕೆ ಪ್ರಮಾಣ: ಜಿಲ್ಲೆಯಲ್ಲಿ ಮೊದಲನೇ ಡೋಸ್‌ ಕೋವಿಡ್‌ ಲಸಿಕೆ ಪಡೆದವರ ಪ್ರಮಾಣ ಶೇ.52ರಷ್ಟಿದೆ. ಎರಡನೇ ಡೋಸ್‌ ಪಡೆದ ವರ ಪ್ರಮಾಣ ಶೇ.36ರಷ್ಟಿದೆ. ಜಿಲ್ಲೆಯಲ್ಲಿ ಮೊದಲನೇ ಡೋಸ್‌ ಕೊಡುವ ಗುರಿ 831302. ಜುಲೈ 2021ರ ಅಂತ್ಯದವರೆಗೆ 436024 ಮಂದಿಗೆ ಮೊದಲನೇ ಡೋಸ್‌ ಲಸಿಕೆ ಕೊಡಲಾಗಿದೆ. ಶೇ.52ರಷ್ಟು ಯಶಸ್ಸು ಸಾಧಿಸಲಾಗಿದೆ. ಎರಡನೇ ಡೋಸ್‌ ಕೊಡ ಬೇಕಾದ ಗುರಿ 415613. ಸಾಧನೆ ಶೇ.36 ಅಂದರೆ 149266 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಪಾಲಿಸುವಂತೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನ ನಿರಂತರವಾಗಿ ನಗರಸಭೆಯಿಂದ ಸಾಗುತ್ತಲೇ ಇದೆ. ಜೊತೆಗೆ ಮಾಸ್ಕ್ ಧರಿಸದ ನಾಗರಿಕರಿಗೆ ದಂಡ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ನಗರಸಭೆ ಜೊತೆಗೆ ನಗರ ವ್ಯಾಪ್ತಿಯ ಪೊಲೀಸರು ಮಾಸ್ಕ್ ಧರಿಸದ ನಾಗರಿಕರಿಗೆ ಸರ್ಕಾರದ ಸೂಚನೆಗಳ ಪ್ರಕಾರ ದಂಡ ವಿಧಿಸಲಾಗುತ್ತಿದೆ.
-ನಂದಕುಮಾರ್‌, ಆಯುಕ್ತರು, ನಗರಸಭೆ

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next