Advertisement

ಕೋವಿಡ್‌ 19: ಪ್ರಮುಖ ದೇಶಗಳಲ್ಲಿ ಹೇಗಿವೆ ಈಗ ಸ್ಥಿತಿಗತಿ

07:56 PM Apr 30, 2020 | sudhir |

ಮಣಿಪಾಲ: ಜಾಗತಿಕ ಮಟ್ಟದಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್‌ ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ದೇಶಗಳಲ್ಲಿ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಆಗಿದ್ದರೆ, ಇನ್ನು ಕೆಲವೆಡೆ ನಿರ್ಬಂಧಗಳು ಮುಂದುವರಿದಿದೆ. ಇದಕ್ಕೆ ಜನರ ಪರ ವಿರೋಧ ಅಭಿಪ್ರಾಯಗಳೂ ಇವೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಅರ್ಜೆಂಟೀನಾವು ಎಲ್ಲ ರೀತಿಯ ವಾಣಿಜ್ಯ ವಿಮಾನಯಾನದ ಮೇಲಿನ ನಿಷೇಧವನ್ನು ಸೆಪ್ಟಂಬರ್‌ 1 ರ ವರೆಗೆ ವಿಸ್ತರಿಸಿದೆ. ಎ. 27ರಂದು ವಿಸ್ತರಿಸಿದ್ದು, ಇದಕ್ಕೆ ಸ್ಪಷ್ಟ ಕಾರಣವನ್ನು ತಿಳಿಸಲಾಗಿಲ್ಲ.

ಮಲೇಷ್ಯಾದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕಾಗಿ ಸಾವಿರಾರು ಜನರನ್ನು ಬಂಧಿಸಲಾಗಿದೆ. ಸ್ವತಃ ಅಲ್ಲಿನ ಉಪ ಆರೋಗ್ಯ ಸಚಿವರು ಕೂಡ ನಿಯಮಗಳನ್ನು ಉಲ್ಲಂ ಸಿದ ಆರೋಪ ಹೊತ್ತಿದ್ದಾರೆ.

ಕೋವಿಡ್ ಮೊತ್ತಮೊದಲಾಗಿ ಕಾಣಿಸಿಕೊಂಡಿದ್ದ ಚೀನದಲ್ಲಿ ನಿಧಾನವಾಗಿ ಜನಜೀವನ ಆರಂಭವಾಗಿದೆ. ಸಾಮಾಜಿಕ ಅಂತರ ಜಾರಿಯಲ್ಲಿದ್ದು, ಕೆಲವು ಶಿಕ್ಷಣ ಸಂಸ್ಥೆಗಳೂ ಕಾರ್ಯಾರಂಭ ಮಾಡಿವೆ. ಕೋವಿಡ್ ಗಂಭೀರವಾಗಿ ಕಾಡಿದ್ದ ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಮೇ 6ರಿಂದ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸಲಿವೆ.

ನೈಜೀರಿಯಾವು ಮುಂದಿನ ವಾರ ಲಾಗೋಸ್‌ ಮತ್ತು ಅಬುಜಾದಲ್ಲಿ ಲಾಕ್‌ಡೌನ್‌ ಹಿಂಪಡೆಯುವ ನಿರೀಕ್ಷೆ ಇದೆ. ಕೆಲವು ಪ್ರದೇಶಗಳಲ್ಲಿ ವ್ಯವಹಾರಗಳನ್ನು ಆರಂಭಿಸಿದರೂ ಸೋಂಕು ಪತ್ತೆ ಪರೀಕ್ಷೆ ಮತ್ತು ಚಿಕಿತ್ಸೆ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲಾಗುವುದು. ಮಾಸ್ಕ್ ಕಡ್ಡಾಯ, ಅನಗತ್ಯ ಅಂತಾರಾಜ್ಯ ಸಂಚಾರ ನಿರ್ಬಂಧ ಹಾಗೂ ರಾತ್ರಿ 8 ಗಂಟೆ ಬಳಿಕ ಕರ್ಫ್ಯೂ ಹೇರಲು ನಿರ್ಧರಿಸಿದೆ. ಇಲ್ಲಿ ಮಾ. 31ರಂದು ಎರಡು ವಾರಗಳ ಕಾಲದ ಲಾಕ್‌ಡೌನ್‌ ಘೋಷಿಸಲಾಗಿತ್ತು. ಬಳಿಕ ಎಪ್ರಿಲ್‌ನಲ್ಲಿ ಎರಡು ಬಾರಿ ವಿಸ್ತರಿಸಲಾಗಿದೆ. ಪ್ರಮುಖ ವ್ಯಾಪಾರ ಕೇಂದ್ರವಾದ ಉತ್ತರ ಭಾಗದ ಕ್ಯಾನೊದಲ್ಲಿ ಎರಡು ವಾರಗಳ ಅವಧಿಗೆ ಲಾಕ್‌ಡೌನ್‌ ವಿಸ್ತರಿಸಿ ಸೋಮವಾರ ಆದೇಶಿಸಲಾಗಿದೆ.

Advertisement

ನೈಜೀರಿಯಾ ಆಫ್ರಿಕಾ ಖಂಡದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, 2014ರಲ್ಲಿ ಎಬೋಲಾ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಮೆ ಹೊಂದಿದೆ. ಈ ನಡುವೆ ಲಾಕ್‌ಡೌನ್‌ನಿಂದ ಸಂಕಷ್ಟದಿಂದಿರುವ ಲಾಗೋಸ್‌ ರಾಜ್ಯದ ಕೈಗಾರಿಕಾ ವಲಯವೊಂದರ ನೂರಾರು ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

ಅಮೆರಿಕದಲ್ಲಿ ಸೋಂಕು ನಿಯಂತ್ರಣದಲ್ಲಿಲ್ಲದಿದ್ದರೂ ಅಲ್ಲಿನ ಕೆಲವು ರಾಜ್ಯಗಳು ತಮ್ಮ ಆರ್ಥಿಕ ವ್ಯವಹಾರಗಳನ್ನು ಆರಂಭಿಸಲು ಮುಂದಾಗಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಲಾಕ್‌ಡೌನ್‌ ಹಿಂಪಡೆತಕ್ಕೂ ಷರತ್ತು ವಿಧಿಸಲಾಗಿದೆ. ಕೋವಿಡ್‌ 19ಗೆ ಇಲ್ಲಿ ಸುಮಾರು 50,000 ಮಂದಿ ಬಲಿಯಾಗಿದ್ದಾರೆ. ಜಗತ್ತಿನಲ್ಲಿಯೇ ಹೆಚ್ಚು ಸಾವು ನೋವು ಸಂಭವಿಸಿದ ದೇಶವೂ ಇದಾಗಿದೆ. ಈ ನಡುವೆ ಕೋವಿಡ್‌ ಪರೀಕ್ಷೆಯ ಪ್ರಮಾಣ ಹೆಚ್ಚಿಸಲು ರಾಜ್ಯ ಸರಕಾರಗಳಿಗೆ ಸಹಾಯ ಮಾಡುವ ಯೋಜನೆಯೊಂದನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ. ಜತೆಗೆ ಶೈಕ್ಷಣಿಕ ವರ್ಷ ಮುಗಿಯುವ ಮೊದಲೇ ಶಾಲಾ – ಕಾಲೇಜುಗಳನ್ನು ತೆರೆಯಲು ಯೋಚಿಸಿ ಎಂದೂ ಗವರ್ನರ್‌ಗಳಿಗೆ ಸೂಚಿಸಿದ್ದಾರೆ.

ಅರ್ಜೆಂಟೀನಾ ಕ್ರಮಕ್ಕೆ ಅಸಮಾಧಾನ
ಇನ್ನೊಂದೆಡೆ ಅರ್ಜೆಂಟೀನಾದ ವಿಮಾನಯಾನ ನಿಷೇಧ ಕ್ರಮವು ಆರ್ಥಿಕತೆ ಮೇಲೆ ದೀರ್ಘ‌ಕಾಲಿಕ ಅಡ್ಡ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಈ ಕ್ರಮವು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುತ್ತದೆ ಮತ್ತು ಸುಮಾರು 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯು ಅರ್ಜೆಂಟೀನಾ ಸರ್ಕಾರಕ್ಕೆ ಪತ್ರ ಬರೆದಿದೆ.

ಲ್ಯಾಟಿನ್‌ ಅಮೆರಿಕನ್‌ ಮತ್ತು ಕೆರಿಬಿಯನ್‌ ವಾಯು ಸಾರಿಗೆ ಸಂಸ್ಥೆಯೂ ಕಳವಳ ವ್ಯಕ್ತಪಡಿಸಿದ್ದು, ಇದರಿಂದ ಈ ವಲಯದ ಅನೇಕ ಕಂಪನಿಗಳು ಸಂಕಷ್ಟಕ್ಕೆ ಗುರಿಯಾಗುತ್ತವೆ ಎಂದಿದೆ. ಸೆ.1ಕ್ಕಿಂತ ತುಂಬಾ ಮುಂಚಿತವಾಗಿ ನಿಷೇಧವನ್ನು ಹಿಂಪಡೆಯುವ ಮನಸ್ಸಿನಲ್ಲಿದ್ದ ಅರ್ಜೆಂಟೀನಾದ ನೆರೆಯ ದೇಶಗಳಿಗೆ ಈ ಕ್ರಮವು ಗಂಟಲ ಮುಳ್ಳಾಗಿದೆ.

ಅರ್ಜೆಂಟೀನಾದಲ್ಲಿ ಇದುವರೆಗೆ 4,033 ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿದ್ದು, 197 ಸಾವು ಸಂಭವಿಸಿದೆ. ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್‌ ಅವರು ಮೇ 10 ರವರೆಗೆ ರಾಷ್ಟ್ರೀಯ ಲಾಕ್‌ಡೌನ್‌ ವಿಸ್ತರಿಸಿ ಕಳೆದ ವಾರಾಂತ್ಯದಲ್ಲಿ ಆದೇಶಿಸಿದ್ದರು.

ಮಲೇಷ್ಯಾದ ಉಪ ಆರೋಗ್ಯ ಸಚಿವ ನೂರ್‌ ಅಜ್ಮಿ ಘಜಲಿ ಅವರು ಜನರೊಂದಿಗೆ ಸೇರಿ ಶಾಲೆಯೊಂದರಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಊಟ ಮಾಡಿ ಅದರ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅವರು ಲಾಕ್‌ಡೌನ್‌ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಕ್ಕೆ ಇದು ಪುರಾವೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 15 ಸಾವಿರ ಮಂದಿಯನ್ನು ಬಂಧಿಸಿ ಅವರಿಂದ 230 ಡಾಲರ್‌ ದಂಡ ವಸೂಲು ಮಾಡಲಾಗಿದೆ ಎಂದು ಹ್ಯೂಮನ್‌ ರೈಟ್ಸ್‌ ವಾಚ್‌ ತಿಳಿಸಿದೆ. ಇಲ್ಲಿ ಮಾರ್ಚ್‌ ಮಧ್ಯಭಾಗದಲ್ಲಿ ಆರಂಭವಾಗಿರುವ ಲಾಕ್‌ಡೌನ್‌ ಮೇ 12ರ ವರೆಗೆ ಜಾರಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next