Advertisement

ಕೋವಿಡ್ ಮುಕ್ತ ಜಿಲ್ಲೆಯಾದ ರಾಮನಗರ : ಜಿಲ್ಲೆಯ 221 ಗ್ರಾಮಗಳಲ್ಲಿ ಶೇ.100 ಲಸಿಕೆ

04:21 PM Dec 09, 2021 | Team Udayavani |

ರಾಮನಗರ: ಕೋವಿಡ್‌ ವೈರಸ್‌ನ ರೂಪಾಂತರಿ ಓಮಿಕ್ರಾನ್‌ ವೈರಸ್‌ ವಿಶ್ವಾದ್ಯಂತ ತಲ್ಲಣ ಮೂಡಿಸಿದೆ. ಕೋವಿಡ್‌ ಸೋಂಕಿನ 2ನೇ ಅಲೆಯಲ್ಲಿ ರಾಜ್ಯ ಕಂಡ ಭೀಕರ ಪರಿಸ್ಥಿತಿ ಮರೆಯುವ ಮುನ್ನವೇ ಕೋವಿಡ್‌ 3ನೇ ಅಲೆ ಅಥವಾ ಒಮಿಕ್ರಾನ್‌ ಸೋಂಕು ಹರಡುವ ಭೀತಿ ಕಾಡುತ್ತಿದೆ. ಭೀತಿಯ ನಡುವೆ ರಾಮನಗರ ಜಿಲ್ಲೆ ಕೋವಿಡ್‌ ಮುಕ್ತ ಜಿಲ್ಲೆಯಾಗಿದೆ.

Advertisement

ಸದ್ಯ ರಾಮನಗರ ಜಿಲ್ಲೆಯಲ್ಲಿ ಒಬ್ಬ ನಾಗರಿಕ ಮಾತ್ರ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಸೋಂಕಿಗೆ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 365 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಚನ್ನಪಟ್ಟಣದಲ್ಲಿ 5378 ಪಾಸಿಟಿವ್‌ ಪ್ರಕರಣಗಳು, ಕನಕಪುರದಲ್ಲಿ 7986 ಪ್ರಕರಣಗಳು, ಮಾಗಡಿಯಲ್ಲಿ 4007 ಪ್ರಕರಣಗಳು ಮತ್ತು ರಾಮನಗರ ತಾಲೂಕಿನಲ್ಲಿ 7336 ಒಟ್ಟು 24707 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 24342 ಮಂದಿ ಯಶಸ್ವಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. 365 ಮಂದಿ ಮೃತ ಪಟ್ಟಿದ್ದಾರೆ.

ಮೊದಲ ಪ್ರಕರಣ ಮಾಗಡಿಯಲ್ಲಿ ಪತ್ತೆ: 2020ರ ಮೇ.25ರಂದು ಮಾಗಡಿ ತಾಲೂಕು ಕುದೂರು ಹೋಬಳಿಯ ಮಾರಸಂದ್ರ ಗ್ರಾಮದ ಎರಡು ವರ್ಷದ ಗಂಡು ಮಗುವಿನಲ್ಲಿ , ಮಾಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕ ಹಾಗೂ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸಿರುವ ಪೊಲೀಸ್‌ ಪೇದೆಗೂ ಸೋಂಕು ದೃಢಪಟ್ಟಿತ್ತು. ರಾಜ್ಯ ರಾಜಧಾನಿ
ಬೆಂಗಳೂರು ನಗರದಲ್ಲಿ ಕೋವಿಡ್‌ ಸೋಂಕು ಅಟ್ಟಹಾಸ ಮೆರೆದಾಗಲೂ ಮಗ್ಗಲಲ್ಲೇ ಇರುವ ರಾಮನಗರ ಜಿಲ್ಲೆಯಲ್ಲಿ ಸೋಂಕು ಹತೋಟಿಯಲ್ಲಿತ್ತು. 18 ತಿಂಗಳ ಕಾಲ ಜನರನ್ನು ಹೈರಾಣಾಗಿದ್ದ ಕೊರೊನಾ ವೈರಸ್‌ ಅಂತೂ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಆದರೆ ಕೋವಿಡ್‌ ಕಾರಣ ಲಾಕ್‌ ಡೌನ್‌, ಸೀಲ್‌ಡೌನ್‌ ಇತ್ಯಾದಿ ಕ್ರಮಗಳಿಂದಾಗಿ
ಜನರ ಆರ್ಥಿಕತೆಗೆ ಭಾರಿ ಪೆಟ್ಟು ಬಿದಿದ್ದೆ. ಒಂದನೇ ಅಲೆಗಿಂತ ರಾಮನಗರದಲ್ಲಿಯೂ ಎರಡನೇ ಅಲೆ ಹೆಚ್ಚು ಆತಂಕ ಸೃಷ್ಠಿಸಿತ್ತು.

ಜಿಲ್ಲಾ ಕೋವಿಡ್‌ ಆಸ್ಪತ್ರೆ ಸ್ವತ್ಛ: ಒಮಿಕ್ರಾನ್‌ ಈಗಾಗಲೆ ಕೆಲವು ರಾಷ್ಟ್ರಗಳಲ್ಲಿ ಹರಡಿದ್ದು, ಭಾರತದಲ್ಲೂ ಭೀತಿ ಸೃಷ್ಟಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಮಿಕ್ರಾನ್‌ ಸೋಂಕು ನಿಯಂತ್ರಿಸಲು ಕ್ರಮ ಕೈಗೊಂಡಿದೆ. ಜಿಲ್ಲಾ ಕೇಂದ್ರ ರಾಮನಗರದ ಕಂದಾಯ ಭವನದಲ್ಲಿರುವ ಜಿಲ್ಲಾ ಕೋವಿಡ್‌ ರೆಫ‌ರಲ್‌ ಆಸ್ಪತ್ರೆಯ ಆವರಣವನ್ನು ನಗರಸಭೆಯ ಸಿಬ್ಬಂದಿ ಸ್ವತ್ಛಗೊಳಿಸಲು ಆರಂಭಿಸಿದ್ದಾರೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ ಗಳನ್ನು ಪುನರ್‌ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಆಕ್ಸಿಜನ್‌ ಉತ್ಪಾದನಾ ಘಟಕಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಜಿಲ್ಲಾಡಳಿತ ಸಭೆಗಳನ್ನು ನಡೆಸುತ್ತಿದೆ. ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾ ಆರೋಗ್ಯ ಇಲಾಖೆ ತೀವ್ರಗೊಳಿಸುತ್ತಿದೆ. ಪ್ರತಿ ಬುಧವಾರ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಜಾರಿಯಲ್ಲಿದೆ.

Advertisement

ಮೊದಲ ಡೋಸ್‌ ಶೇ.95 ಸಾಧನೆ: ಜಿಲ್ಲೆಯಲ್ಲಿ 823000 ಮಂದಿಗೆ ಕೋವಿಡ್‌ ಲಸಿಕೆ ನೀಡುವ ಗುರಿಯನ್ನು ಜಿಲ್ಲಾಡಳಿತ ಇಟ್ಟು ಕೊಂಡಿದೆ. ಈ ಪೈಕಿ 18 ವರ್ಷ ಮೇಲ್ಪಟ್ಟ 781349 ಮಂದಿ ನಾಗರಿಕರಿಗೆ ಲಸಿಕೆ ನೀಡಲಾಗಿದೆ. (ಡಿ.3ಕ್ಕೆ ಅನ್ವಯಿಸುವಂತೆ). ಚನ್ನ ಪಟ್ಟಣದಲ್ಲಿ ಶೇ.91 ಸಾಧನೆಯಾಗಿದೆ. ಕನಕಪುರದಲ್ಲಿ ಶೇ. 95, ಮಾಗಡಿಯಲ್ಲಿ ಶೇ.93 ಮತ್ತು ರಾಮನಗರ
ತಾಲೂಕಿನಲ್ಲಿ ಶೇ.100 ಸಾಧನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಶೇ.95 ಸಾಧನೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.

ಎರಡನೇ ಡೋಸ್‌ ಶೇ.84 ಸಾಧನೆ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ 2ನೇ ಡೋಸ್‌ ನೀಡಲು 701196 ಗುರಿಯಿದೆ. ಈ ಪೈಕಿ 588048 ಮಂದಿಗೆ ಕೋವಿಡ್‌ ಲಸಿಕೆ 2ನೇ ಡೋಸ್‌ ನೀಡಲಾಗಿದೆ. ಶೇ.84 ಸಾಧನೆಯಾಗಿದೆ. ಎರಡನೇ ಡೋಸ್‌ ವಿಚಾರದಲ್ಲಿ ಚನ್ನಪಟ್ಟಣದಲ್ಲಿ ಶೇ.82 ಸಾಧನೆಯಾಗಿದೆ. ಕನಕಪುರದಲ್ಲಿ ಶೇ.85, ಮಾಗಡಿಯಲ್ಲಿ ಶೇ.84 ಮತ್ತು ರಾಮನಗರದಲ್ಲಿ ಶೇ.84 ಸಾಧನೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಎರಡನೇ ಡೋಸ್‌ ಉಳಿದ ಶೇ.16 ಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಲಸಿಕೆ ದಾಸ್ತಾನು: ಜಿಲ್ಲೆಯಲ್ಲಿ ಕೋವಾಕ್ಸಿನ್‌ 12560 ಡೋಸ್‌ಗಳು ಮತ್ತು ಕೋವಿ ಶೀಲ್ಡ್‌ 45210 ಡೋಸ್‌ ಒಟ್ಟು 57570 ಡೋಸ್‌ ದಾಸ್ತಾನು ಇದೆ. ಇಲ್ಲಿಯವರೆಗೆ ಜಿಲ್ಲೆಗೆ ಕೋವಾ ಕ್ಸಿನ್‌ 221200 ಡೋಸ್‌ಗಳು ಮತ್ತು ಕೋವಿ ಶೀಲ್ಡ್‌ 1027100 ಡೋಸ್‌ ಲಭ್ಯವಾಗಿದೆ.

– ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next