Advertisement

ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್‌ ಲಸಿಕೆ ಪ್ರಯೋಗ; ಕೋವಿಡ್ ನಿರ್ಮೂಲನೆಯತ್ತ ಪ್ರಥಮ ಹೆಜ್ಜೆ

07:05 PM Jan 16, 2021 | Team Udayavani |

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊವಿಶೀಲ್ಡ್‌ ಲಸಿಕೆಗೆ ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಆಯಾ ಜಿಲ್ಲೆಗಳಲ್ಲಿಯೂ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿ. ಪಂ., ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಕೋವಿಡ್‌ 19 ಲಸಿಕಾಕರಣದ ಉದ್ಘಾಟನೆಯನ್ನು ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್‌ ಅವರು ನೆರವೇರಿಸಿದರು.

Advertisement

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಪ್ರಧಾನ ಮಂತ್ರಿಗಳು ರಾಷ್ಟ್ರಾದ್ಯಂತ ಉದ್ಘಾಟಿಸಿದ್ದಾರೆ. ಉಡುಪಿ ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. 5 ಲಸಿಕಾ ಕೇಂದ್ರಗಳಲ್ಲಿ ತಲಾ 100 ಮಂದಿ ಫ‌ಲಾನುಭವಿಗಳಿಗೆ ಲಸಿಕೆ ಹಾಗೂ ಕಂಡಲೂರು ಲಸಿಕಾ ಕೇಂದ್ರದಲ್ಲಿ 38 ಮಂದಿ ಫ‌ಲಾನುಭವಿಗಳಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಒಟ್ಟು 538 ಫ‌ಲಾನುಭವಿಗಳಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಜಿಲ್ಲೆಯಲ್ಲಿ 22,333 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. 12,000 ಲಸಿಕೆ ಲಭ್ಯವಿದೆ. ಅದನ್ನು ಹಂತ-ಹಂತವಾಗಿ ನೀಡಲಾಗುತ್ತಿದೆ. ಅದು ಮುಗಿದ ಬಳಿಕ ಮತ್ತೂಂದು ಹಂತದಲ್ಲಿ ಕೋವ್ಯಾಕ್ಸಿನ್‌ ಬರಲಿದೆ. 258 ಶಿಬಿರ ಮಾಡುವ ಬಗ್ಗೆ ಮೈಕ್ರೋಪ್ಲಾನ್‌ ಸಿದ್ದಪಡಿಸಲಾಗಿದೆ. 139 ಮಂದಿ ವ್ಯಾಕ್ಸಿನೇಟರ್‌ಗಳನ್ನು ತರಬೇತಿಗೊಳಿಸಲಾಗಿದೆ. ಪ್ರತೀ ಕೇಂದ್ರಗಳಲ್ಲಿ ಹೆಚ್ಚುವರಿ ವ್ಯಾಕ್ಸಿನೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಎರಡನೇ ಹಂತದ ಪಟ್ಟಿ ಜ.20ರೊಳಗೆ ಅಂತಿಮವಾಗಲಿದೆ. ಫ್ರಂಟ್‌ಲೆçನ್‌ ವಾರಿಯರ್ಗಳ ಪಟ್ಟಿ ತಯಾರಿಸಲಾಗುತ್ತಿದೆ ಎಂದರು.

538 ಫ‌ಲಾನುಭವಿಗಳಿಗೆ ವ್ಯಾಕ್ಸಿನ್‌
ಈ ಹಿಂದೆ 6 ಆರೋಗ್ಯ ಕೇಂದ್ರಗಳಲ್ಲಿ ತಲಾ 100ರಂತೆ 600 ಮಂದಿಗೆ ಲಸಿಕೆ ನೀಡಲಾಗುವುದೆಂದು ಸೂಚಿಸಲಾಗಿತ್ತು. ಆದರೆ ಕಂಡ್ಲೊರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 38 ಮಂದಿಗೆ ಮಾತ್ರ ವ್ಯಾಕ್ಸಿನ್‌ ನೀಡಲಾಯಿತು. ಈ ಮೂಲಕ ಶನಿವಾರ ಜಿಲ್ಲೆಯಲ್ಲಿ ಒಟ್ಟು 538 ಮಂದಿಗೆ ವ್ಯಾಕ್ಸಿನ್‌ ನೀಡಲಾಯಿತು. 28 ದಿನಗಳ ಬಳಿಕ ಮತ್ತೂಮ್ಮೆ ಇವರಿಗೆ ವ್ಯಾಕ್ಸಿನ್‌ ನೀಡಲಾಗುತ್ತದೆ.
3 ನಿಮಿಷಕ್ಕೆ ಒಬ್ಬರಿಗೆ ವ್ಯಾಕ್ಸಿನ್‌ ನೀಡಲಾಯಿತು. ರವಿವಾರ ರಜಾದಿನವಾದರೂ ಕೆಲವೆಡೆ ವ್ಯಾಕ್ಸಿನ್‌ ನೀಡಲಾಗುತ್ತದೆ. ಬುಧವಾರದಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ಜಿಲ್ಲಾಸ್ಪತ್ರೆ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ, ಕಂಡ್ಲೊರು ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಳ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

Advertisement

ಕಾಪು ಶಾಸಕ ಲಾಲಾಜಿ ಮೆಂಡನ್‌, ಉಡುಪಿ ಜಿ.ಪಂ.ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷೀ ಮಂಜುನಾಥ್‌ ಕೊಳ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ತಾ.ಪಂ.ಅಧ್ಯಕ್ಷೆ ಸಂಧ್ಯಾ ಕಾಮತ್‌, ಜಿ.ಪಂ.ಸಿಇಒ ಡಾ| ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ, ಬಿಜೆಪಿ ನಗರಾಧ್ಯಕ್ಷ ಮಹೇಶ್‌ ಠಾಕೂರ್‌ ಉಪಸ್ಥಿತರಿದ್ದರು. ಜಿಲ್ಲಾ ಸರ್ಜನ್‌ ಡಾ|ಮಧುಸೂದನ್‌ ನಾಯಕ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಮೋದಿ ಭಾಷಣ ವೀಕ್ಷಣೆ
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪರದೆಯಲ್ಲಿ ವೀಕ್ಷಿಸಲಾಯಿತು. ಸುಮಾರು ಅರ್ಧಗಂಟೆಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಯಿತು. ಪ್ರಧಾನಿಯವರ ಭಾಷಣ ಮುಕ್ತಾಯವಾಗುತ್ತಿದ್ದಂತೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಪ್ರಥಮ ದಿನದಲ್ಲಿ ಲಸಿಕೆ ತೆಗೆದುಕೊಂಡ ಪ್ರಮುಖರು
– ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ
– ತಾಯಿ ಮತ್ತು ಮಕ್ಕಳ ಸಂತಾನೋತ್ಪತ್ತಿ ಅಧಿಕಾರಿ ಡಾ| ಎಂ.ಜಿ. ರಾಮ
– ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌

ಒಂದು ದಿನ ಮೊದಲೇ ಸಂದೇಶ ಬಂದರೆ ಉತ್ತಮ
ಕೊರೊನಾದಿಂದಾಗಿ ಕೆಲವು ತಿಂಗಳ ಹಿಂದೆ ಭಯದ ವಾತಾವರಣ ನಿರ್ಮಾಣವಾಗಿತ್ತು. ವ್ಯಾಕ್ಸಿನ್‌ ಬಂದರೆ ಸಾಕೆಂದು ಕಾಯುತ್ತಿದ್ದೆವು. ಈಗ ವ್ಯಾಕ್ಸಿನ್‌ ಬಂದಿರುವುದು ಖುಷಿ ತಂದಿದೆ. ಮುಂಜಾನೆ 7.30ಕ್ಕೆ ಸಂದೇಶ ಬಂದಿತ್ತು. ಎಷ್ಟು ಗಂಟೆಗೆ ಹಾಗೂ ಎಲ್ಲಿಗೆ ಬರಬೇಕೆಂಬ ಸೂಚನೆ ಆ ಸಂದೇಶದಲ್ಲಿತ್ತು. ಮುಂದಿನ ದಿನಗಳಲ್ಲಿ ಈ ಸಂದೇಶ 1 ದಿನ ಮೊದಲೇ ಬಂದರೆ ತುಂಬಾ ಅನುಕೂಲವಾಗಲಿದೆ. ಇದರಿಂದ ಜನರಿಗೆ ಸಮಯ ನಿಗದಿಪಡಿಸಲು ಸಾಧ್ಯವಿದೆ.
-ಡಾ| ಗಣಪತಿ ಹೆಗ್ಡೆ,  ಜಿಲ್ಲಾಸ್ಪತ್ರೆಯ ಅರಿವಳಿಕೆ ತಜ್ಞರು, ಕೋವಿಡ್‌ ಉಸ್ತುವಾರಿ (ಪ್ರಥಮ ಫ‌ಲಾನುಭವಿ)

ನಿಯಮ ಪಾಲನೆ ಅಗತ್ಯ
ಪ್ರಥಮ ದಿನದಲ್ಲಿ ವ್ಯಾಕ್ಸಿನ್‌ ಪಡೆಯುತ್ತಿರುವ ಬಗ್ಗೆ ಸಂತೋಷವಿದೆ. ಮೊದಲ ದಿನವೇ ಸಂದೇಶ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಯಾರೂ ಕೂಡ ಈ ವ್ಯಾಕ್ಸಿನ್‌ ಅನ್ನು ತಿರಸ್ಕರಿಸದೆ ಇದನ್ನು ಸದುಪಯೋಗಿಸಿಕೊಳ್ಳಬೇಕು. ಈ ಮೂಲಕ ಮಟ್ಟಹಾಕಿರುವ ಕೊರೊನಾವನ್ನು ಹೋಗಲಾಡಿಸಲು ಸಾಧ್ಯವಿದೆ. ವ್ಯಾಕ್ಸಿನ್‌ ಪಡೆದ ಬಳಿಕವೂ ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡರೆ ಉತ್ತಮ.
-ಬಸವರಾಜ ದಳವಾಯಿ, ಜಿಲ್ಲಾಸ್ಪತ್ರೆಯ ಗ್ರೂಪ್‌ ಡಿ ನೌಕರರು (ದ್ವಿತೀಯ ಫ‌ಲಾನುಭವಿ)

ಆತಂಕ ಬೇಡ
ಹಲವಾರು ತಿಂಗಳುಗಳ ಪರಿಶ್ರಮದ ಬಳಿಕ ವ್ಯಾಕ್ಸಿನ್‌ ಬಂದಿದೆ. ಮೂರು ಹಂತಗಳಲ್ಲಿ ಇದನ್ನು ನೀಡಲಾಗುತ್ತದೆ. ಸೂಕ್ತ ರೀತಿಯ ನಿರ್ವಹಣೆಯ ಎಲ್ಲ ರೀತಿಯ ಸಿದ್ದತೆಗಳೂ ನಡೆದಿವೆ. ಲಸಿಕೆ ನೀಡುವ ಮುನ್ನ ಫಲಾನುಭವಿಗಳನ್ನು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಫಲಾನುಭವಿಗಳಿಗೆ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌ ಸಹಿತ ಇನ್ನಿತರ ಅಗತ್ಯ ವೈದ್ಯಕೀಯ ಉಪಕರಣಗಳು ಲಭ್ಯವಿರುವಂತೆ ಕ್ರಮ ತೆಗೆದುಕೊಳ್ಳಲಾಗಿದೆ.
– ಡಾ| ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ.

ಚಿತ್ರಗಳು ; ಆಸ್ಟ್ರೋ ಮೋಹನ್

Advertisement

Udayavani is now on Telegram. Click here to join our channel and stay updated with the latest news.

Next