ವಿಧಾನ ಪರಿಷತ್: ಒಡಂಬಡಿಕೆ, ಅರ್ಹತೆ, ಅನರ್ಹತೆ, ಸಚಿವ ಸ್ಥಾನ ಕುರಿತಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕಾಂಗ್ರೆಸ್ ಸದಸ್ಯ ಎಚ್.ಎಂ.ರೇವಣ್ಣ ಅವರ ನಡುವೆ ಕೆಲಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು.
ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ವಿಷಯ ಮಂಡನೆ ವೇಳೆ ಜನರು ನಮಗೆ ಪೂರ್ಣ ಬಹುಮತ ನೀಡಿರುವುದರಿಂದಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಎನ್ನುತ್ತಿದ್ದಂತೆ, ಕಾಂಗ್ರೆಸ್ ಸದಸ್ಯ ಎಚ್.ಎಂ.ರೇವಣ್ಣ ಎದ್ದುನಿಂತು, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಅನರ್ಹರಾಗಿ, ಅರ್ಹರಾಗಿ ಈಗ ಸಚಿವರಾಗಿದ್ದಾರೆ ಎನ್ನುತ್ತಿದ್ದಂತೆ ಸಚಿವ ಎಸ್.ಟಿ.ಸೋಮಶೇಖರ್, ನಾವು ಅನರ್ಹರಾಗಿ ಸರ್ಕಾರ ಬಿದ್ದಿದ್ದಕ್ಕೆ ಅತ್ಯಂತ ಖುಷಿಪಟ್ಟವರಲ್ಲಿ ನೀವೂ ಒಬ್ಬರಾಗಿದ್ದಿರಿ ಎಂದು ತಿರುಗೇಟು ನೀಡಿದರು.
ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ಸರ್ಕಾರ ಬಂದಿರುವುದಕ್ಕೆ ಎಚ್.ಎಂ.ರೇವಣ್ಣ ಅವರಿಗೂ ಖುಷಿಯಿದೆ. ಎಸ್.ಟಿ.ಸೋಮಶೇಖರ್ ಹಾಗೂ ರೇವಣ್ಣ ನಡುವಿನ ಒಡಂಬಡಿಕೆ ಹಾಗೂ ವಿಶ್ವಾಸದ ಬಗ್ಗೆ ಗೊತ್ತಿದೆ ಎಂದರು. ಇದಕ್ಕೆ ಎಚ್.ಎಂ.ರೇವಣ್ಣ ಪ್ರತಿಕ್ರಿಯಿಸಿ, ವಿಧಾನ ಪರಿಷತ್ ಸದಸ್ಯರಾಗದೇ ಉಪಮುಖ್ಯಮಂತ್ರಿಯಾಗಿದ್ದೀರಿ ಎಂದು ಲಕ್ಷ್ಮಣ ಸವದಿಯವರ ಕಾಲೆಳೆದರು.
ಜನರು ನಮಗೆ ಬಹುಮತ ಕೊಟ್ಟಿರುವುದಕ್ಕೆ ಸಿಎಎ ಜಾರಿಗೆ ತಂದಿದ್ದೇವೆ. ಪ್ರಣಾಳಿಕೆಯಲ್ಲೇ ಈ ವಿಷಯ ತಿಳಿಸಲಾಗಿತ್ತು ಎಂದು ಪ್ರಾಣೇಶ್ ಪ್ರಸ್ತಾಪ ಮಾಡಿದರು. ಆಗ ಎಚ್.ಎಂ.ರೇವಣ್ಣ ಎದ್ದುನಿಂತು, ನೂರಕ್ಕೆ ನೂರಷ್ಟು ಮತ ನಿಮಗೆ ಬಂದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗು ವುದಕ್ಕೆ ಬಹುಮತ ಇತ್ತಾ?ನಮ್ಮವರನ್ನ ಎಳೆದುಕೊಂಡು ಹೋಗಿ ಸರ್ಕಾರ ಮಾಡಿದ್ದೀರಿ ಎಂದರು.
ಆಗ ಸಚಿವರಾದ ರಮೇಶ್ ಜಾರಕಿಹೋಳಿ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ನಮ್ಮನ್ನ ಯಾರೂ ಎಳೆದುಕೊಂಡು ಹೋಗಿಲ್ಲ. ನಾವೇ ಬಿಜೆಪಿಗೆ ಬಂದು ಗೆದ್ದಿದ್ದೇವೆ ಎಂದು ತಿರುಗೇಟು ನೀಡಿದರು. ಅಲ್ಲದೇ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಬಹುಮತ ಇತ್ತಾ ಎಂದು ಸಚಿವ ಸೋಮಶೇಖರ್ ತಿರುಗೇಟು ನೀಡಿದರು. ನಂತರ ಮಧ್ಯಪ್ರವೇಶಿಸಿದ ಸಭಾಪತಿ ವಿಷಯಾಂತರಕ್ಕೆ ಅನುಮತಿ ನೀಡದೆ, ಸುಗಮ ಕಲಾಪಕ್ಕೆ ಅನುಮತಿ ನೀಡಿದರು.