ಬೆಂಗಳೂರು: ರಾಜ್ಯದಲ್ಲಿ 18 ವರ್ಷಕ್ಕಿಂತ ಮೆಲ್ಪಟ್ಟವರಿಗೆ ಕೊವೊವ್ಯಾಕ್ಸ್ ಕೊರೊನಾ ಲಸಿಕೆ ನೀಡುಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಅರುಣ್ ಕುಮಾರ್ ಅಗರ್‌ವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ, ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮತ್ತು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಯಂತೆ ವಯಸ್ಕರಿಗೆ ಮತ್ತು ಮಕ್ಕಳಿಗೆ ಕೊವೊವ್ಯಾಕ್ ಲಸಿಕೆ ಬಳಸಲು ಕೇಂದ್ರ ಸರ್ಕಾರವು 2021ರ ಮಾ.8ರಂದು ಮತ್ತು 2021ರ ಡಿ.27ರಂದು ಅನುಮತಿ ನೀಡಿದೆ. ಹೀಗಿದ್ದರೂ ಸಹ ಕೊವೊವ್ಯಾಕ್ಸ್ 12ರಿಂದ 17 ವರ್ಷದ ಮಕ್ಕಳಿಗೆ ಕೊಡಲಾಗುತ್ತಿದೆ. ನಾನು ಹಿರಿಯ ನಾಗರಿಕನಾಗಿದ್ದು, ಮಧುಮೇಹ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳುವುದಿಂದ ನನಗೆ ತುಂಬಾ ಅಪಾಯವಾಗಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಕೊವೊವ್ಯಾಕ್ಸ್ ಅತ್ಯುತ್ತಮ ಲಸಿಕೆಯಾಗಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಶೇ.89ಕ್ಕಿಂತ ಪರಿಣಾಮಕಾರಿಯಾಗಿದೆ. ಈ ಅಂಶವನ್ನು ಹಲವು ವೈಜ್ಞಾನಿಕ ವರದಿಗಳು ಸಹ ದೃಢಪಡಿಸಿದೆ. ಹಾಗಾಗಿ, ಕೊವಿಶೀಲ್ಡ್ ಅಥವಾ ಕೋವ್ಯಾಕ್ಸಿನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿರುವ ಲಸಿಕೆಯನ್ನೇ ಜನರಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ತಾನು ಈವರೆಗೂ ಯಾವುದೇ ಲಸಿಕೆ ಪಡೆದಿಲ್ಲ. ಇದರಿಂದ ಎದುರಾಗುವ ತೊಂದರೆಗಳಿಂದ ತಪ್ಪಿಸಿಕೊಳ್ಳೂವುದಕ್ಕಾಗಿ 2020ರ ಮಾರ್ಚ್‌ನಿಂದಲೂ ಮನೆಯಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದೇನೆ. ಕೊವೋವ್ಯಾಕ್ಸ್ ಲಸಿಕೆ ಬಿಡುಗಡೆ ಮಾಡಿದರೆ, ಅದನ್ನು ಹಾಕಿಸಿಕೊಳ್ಳಲು ತಾನು ಸಿದ್ದನಿದ್ದೇನೆ. ಹಾಗಾಗಿ, ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವೊವ್ಯಾಕ್ಸ್ ಲಸಿಕೆ ನೀಡಲು ಆದೇಶಿಸಬೇಕು.ಅರ್ಜಿದಾರರು ಮನವಿ ಮಾಡಿದ್ದಾರೆ.