ನವದೆಹಲಿ: ಏರ್‌ಸೆಲ್- ಮ್ಯಾಕ್ಸಿಸ್ ಡೀಲ್ ಹಗರಣದಲ್ಲಿ ಕೇಂದ್ರದ ದೂರ ಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್ ಮತ್ತು ಸಹೋದರ ಕಲಾನಿಧಿ ಮಾರನ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಕ್ಲೀನ್‌ಚಿಟ್ ನೀಡಿದೆ.
ಸಿಬಿಐ ಮತ್ತು ಜಾರಿ ನಿರ್ದೇಶ ನಾಲಯಗಳು ಇವರಿಬ್ಬರ ವಿರುದ್ಧ ತನಿಖೆ ನಡೆಸುತ್ತಿದ್ದು, ಈ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದವು. ಆದರೆ 2ಜಿ ಸ್ಪೆಕ್ಟ್ರಂ ಹಗರಣ ಕುರಿತಂತೆ ವಿಚಾರಣೆ ನಡೆಸುತ್ತಿರುವ ನ್ಯಾ. ಒ ಪಿ ಸೈನಿ ಅವರು ಈ ತೀರ್ಪು ನೀಡಿದ್ದಾರೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ಮೇಲಿನ ಕೇಸು ಖುಲಾಸೆಯಾಗಿದೆ’ ಎಂದು ನ್ಯಾ. ಸೈನಿ ಅವರು ತೀರ್ಪಿನಲ್ಲಿ ಹೇಳಿದ್ದಾರೆ. ಈ ಡೀಲ್ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಸಲ್ಲಿಸಿದ್ದ ಚಾರ್ಜ್‌ಶೀಟ್, ಇವರೆಲ್ಲರ ಮೇಲಿನ ಆರೋಪ ಸಾಬೀತು ಮಾಡುವಲ್ಲಿ ವಿಫಲ ವಾಗಿವೆ ಎಂದು ಹೇಳಿದ್ದಾರೆ.
2006ರಲ್ಲಿ ದಯಾನಿಧಿ ಮಾರನ್ ಅವರು ಯುಪಿಎ ಸರ್ಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದರು. ಈ ಪ್ರಭಾವವನ್ನೇ ಬಳಸಿ ಚೆನ್ನೈ ಮೂಲದ ಏರ್‌ಸೆಲ್ ಕಂಪನಿಯನ್ನು ಮಲೇಷ್ಯಾ ಮೂಲದ ಮ್ಯಾಕ್ಸಿಸ್‌ಗೆ ಮಾರಾಟ ಮಾಡಿಸುವಲ್ಲಿ ನೆರವಾಗಿದ್ದರು. ಇದಕ್ಕಾಗಿ ಅವರು 600 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದರು ಎಂಬ ಆರೋಪವಿತ್ತು.
2014ರಲ್ಲಿ ಸಿಬಿಐ ಆರೋಪಿಗಳೆಲ್ಲರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಇದರಲ್ಲಿ ದಯಾನಿಧಿ ಮಾರನ್, ಕಲಾನಿಧಿ ಮಾರನ್, ಮಲೇಷ್ಯಾದ ಉದ್ಯಮಿ ಟಿ ಆನಂದಕೃಷ್ಣನ್, ಏರ್‌ಸೆಲ್ ಕಂಪನಿಯ ಮಾಲೀಕ ಸಿ ಶಿವಶಂಕರನ್ ಅವರ ಹೆಸರೂ ಸೇರಿತ್ತು. ಗುರುವಾರದ ಆದೇಶದಲ್ಲಿ ಕೋರ್ಟ್ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ಆರೋಪವನ್ನು ತಳ್ಳಿ ಹಾಕಿದೆ. “”ಮಾರನ್ ಸಹೋದರರು ಕಿಕ್‌ಬ್ಯಾಕ್ ಸ್ವೀಕರಿಸಿರುವುದಕ್ಕೆ ಅಥವಾ ಯಾಕೆ ಸ್ವೀಕರಿಸಬೇಕು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ.
ಇದೊಂದು ಅಪಾಯಕಾರಿ ಹೆಜ್ಜೆ. ಇಂಥದ್ದೇ ಕಾರಣಗಳನ್ನು ಇಟ್ಟುಕೊಂಡು ಸರ್ಕಾರದ ಯಾರ ಮೇಲಾದರೂ ಆರೋಪ ಹೊರಿಸಬಹುದಾಗಿದೆ” ಎಂದು ಕೋರ್ಟ್ ಹೇಳಿದೆ. ಮಾರನ್ ಅವರು ಮಾತನಾಡಿ, ನನ್ನ ಮೇಲಿನ ಯೋಜಿತ ಸಂಚಿದು.
ರಾಜಕೀಯ ಉದ್ದೇಶಕ್ಕಾಗಿ ಹೂಡಿ ಹಿಂಸೆ ನೀಡಲಾಗಿತ್ತು. ನನಗೆ ಆದ ಸ್ಥಿತಿ ಬೇರಾರಿಗೂ ಆಗದೇ ಇರಲಿ ಎಂದು
ಹೇಳಿದ್ದಾರೆ. ಸಿಬಿಐ ವಿಶೇಷ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಇ.ಡಿ. ತಿಳಿಸಿದೆ.