Advertisement

ವರುಣನ ಕೃಪೆ; ಶೇ.45 ಬಿತ್ತನೆ ಪೂರ್ಣ

09:40 AM Jul 10, 2019 | Team Udayavani |

ಹುಬ್ಬಳ್ಳಿ: ಮಳೆ ಕೊರತೆಯಿಂದ ಮುಂಗಾರು ಬಿತ್ತನೆ ಕಾರ್ಯ ಕುಂಠಿತಗೊಂಡಿತ್ತಾದರೂ, ಕಳೆದ ಕೆಲ ದಿನಗಳಿಂದ ವರುಣ ಕೃಪೆ ತೋರಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ತಾಲೂಕಿನಲ್ಲಿ ಇದುವರೆಗೆ ಶೇ.45 ಬಿತ್ತನೆಯಾಗಿದೆ.

Advertisement

ಕಳೆದ ಬಾರಿ ಬರದಿಂದ ಮುಂಗಾರು-ಹಿಂಗಾರು ಮಳೆ ವೈಫ‌ಲ್ಯದಿಂದ ಕಂಗಾಲಾಗಿದ್ದ ರೈತ ಸಮೂಹ ಈ ಬಾರಿಯಾದರೂ, ಉತ್ತಮ ಮಳೆ ಬಂದೀತೆಂದು ಆಸೆ ಕಂಗಳಿಂದ ನೋಡುವಂತಾಗಿತ್ತು. ಈ ಸಲ ಮುಂಗಾರು ವಿಳಂಬ ಹಾಗೂ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತಾಗಿತ್ತು. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಒಂದಿಷ್ಟು ಆಸೆ ಚಿಗುರುವಂತೆ ಮಾಡಿದೆ.

ಕೃಷಿ ಇಲಾಖೆ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಒಟ್ಟಾರೆ 39,498 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಅದರಲ್ಲಿ ಶೇ. 45 ಅಂದರೆ 17,879 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಹುಬ್ಬಳ್ಳಿ ಹೋಬಳಿಯಲ್ಲಿ 2,956 ಹೆಕ್ಟೇರ್‌, ಶಿರಗುಪ್ಪಿ ಹೋಬಳಿಯಲ್ಲಿ 3,246 ಹೆಕ್ಟೇರ್‌, ಛಬ್ಬಿ ಹೋಬಳಿಯಲ್ಲಿ 11,677 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ನೀರಾವರಿ ಮತ್ತು ಖುಷ್ಕಿ ಜಮೀನಿನಲ್ಲಿ ಒಟ್ಟಾರೆ 4,681.8 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಹುಬ್ಬಳ್ಳಿ ಹೋಬಳಿಯಲ್ಲಿ ಗೋವಿನ ಜೋಳ 245 ಹೆಕ್ಟೇರ್‌, ಛಬ್ಬಿ ಹೋಬಳಿಯಲ್ಲಿ 2,257 ಹೆಕ್ಟೇರ್‌ ಸೇರಿ ಒಟ್ಟು 2,502 ಹೆಕ್ಟೇರ್‌ ಬಿತ್ತನೆಯಾಗಿದೆ. ಶಿರಗುಪ್ಪಿ ಹೋಬಳಿಯಲ್ಲಿ ಏಕದಳ ಧಾನ್ಯ ಬಿತ್ತನೆಯಾಗಿಲ್ಲ.

8,218 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬಿತ್ತನೆ ಗುರಿ ಹೊಂದಲಾಗಿದೆ. ಹುಬ್ಬಳ್ಳಿ ಹೋಬಳಿಯಲ್ಲಿ 486 ಹೆಕ್ಟೇರ್‌, ಶಿರಗುಪ್ಪಿ 1,859 ಹೆಕ್ಟೇರ್‌, ಛಬ್ಬಿ 200 ಹೆಕ್ಟೇರ್‌ ಸೇರಿ ಒಟ್ಟು 2,545 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲಿ ಹೆಸರು 7,500 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಹುಬ್ಬಳ್ಳಿ ಹೋಬಳಿಯಲ್ಲಿ 285 ಹೆಕ್ಟೇರ್‌, ಶಿರಗುಪ್ಪಿ 1,840 ಹೆಕ್ಟೇರ್‌, ಛಬ್ಬಿ 72 ಹೆಕ್ಟೇರ್‌ ಸೇರಿ 2,197 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

Advertisement

ಎಣ್ಣೆಕಾಳು ಬಿತ್ತನೆಯಲ್ಲಿ ಶೇಂಗಾ 5,889 ಹೆಕ್ಟೇರ್‌, ಸೋಯಾ ಅವರೆ 9,889 ಹೆಕ್ಟೇರ್‌ ಸೇರಿ ಒಟ್ಟಾರೆ 16,028 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಹುಬ್ಬಳ್ಳಿ ಹೋಬಳಿಯಲ್ಲಿ 494 ಹೆಕ್ಟೇರ್‌, ಶಿರಗುಪ್ಪಿ 710 ಹೆಕ್ಟೇರ್‌, ಛಬ್ಬಿ 983 ಹೆಕ್ಟೇರ್‌ ಸೇರಿ ಒಟ್ಟು 2,187 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ನೀರಾವರಿ ಮತ್ತು ಖುಷ್ಕಿ ಜಮೀನಿನಲ್ಲಿ ವಾಣಿಜ್ಯ ಬೆಳೆಗಳನ್ನು 10,570 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಬಿಟಿ ಹತ್ತಿ 10,478 ಹೆಕ್ಟೇರ್‌ ಸೇರಿದೆ. ಅದರಲ್ಲಿ ಹುಬ್ಬಳ್ಳಿ ಹೋಬಳಿಯಲ್ಲಿ 426 ಹೆಕ್ಟೇರ್‌, ಶಿರಗುಪ್ಪಿ ಹೋಬಳಿಯಲ್ಲಿ 677 ಹೆಕ್ಟೇರ್‌, ಛಬ್ಬಿ ಹೋಬಳಿಯಲ್ಲಿ 872 ಹೆಕ್ಟೇರ್‌ ಸೇರಿ ಒಟ್ಟು 1,975 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಹುಬ್ಬಳ್ಳಿ ತಾಲೂಕಿನಲ್ಲಿ ವಾಡಿಕೆಗಿಂತ ಈ ಬಾರಿ ಉತ್ತಮ ಮಳೆಯಾಗಿದೆ. 39,498 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಬೀಜ, ಗೊಬ್ಬರ ಕೊರತೆಯಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇದೆ. ರೈತರಿಗೆ ಆನ್‌ಲೈನ್‌ ವ್ಯವಸ್ಥೆಯಡಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಜತೆಗೆ ರೈತ ಸಂಪರ್ಕ ಕೇಂದ್ರ, ಉಪ ಬೀಜ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲೂ ವಿತರಿಸಲಾಗುತ್ತಿದೆ. ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ.•ವಿಠಲರಾವ್‌, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ.

ಮಳೆ ಪ್ರಮಾಣ:

ಹುಬ್ಬಳ್ಳಿ ತಾಲೂಕಿನಲ್ಲಿ 2019ರ ಜನವರಿಯಿಂದ ಜುಲೈ 8 ರವರೆಗೆ ವಾಸ್ತವಿಕವಾಗಿ 364 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ವಾಡಿಕೆಯಂತೆ ಈ ಅವಧಿಯಲ್ಲಿ 271 ಮಿ.ಮೀ. ಮಳೆ ಆಗುತ್ತಿತ್ತು. ಜೂನ್‌ ತಿಂಗಳಲ್ಲಿ ಸಾಮಾನ್ಯವಾಗಿ ವಾಡಿಕೆಯಂತೆ 98 ಮಿ.ಮೀ. ಮಳೆಯಾಗಬೇಕಿತ್ತು. ಈ ಬಾರಿ 132 ಮಿ.ಮೀ. ಮಳೆಯಾಗಿದೆ. ಜುಲೈ 1ರಿಂದ 8ರವರೆಗೆ 214ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಜುಲೈ 8ರವರೆಗೆ ಹುಬ್ಬಳ್ಳಿ ಹೋಬಳಿಯಲ್ಲಿ ವಾಡಿಕೆಯಂತೆ 276 ಮಿ.ಮೀ. ಮಳೆಯಾಗಬೇಕಿತ್ತು. ವಾಸ್ತವವಾಗಿ 428 ಮಿ.ಮೀ. ಮಳೆಯಾಗಿದೆ. ಛಬ್ಬಿ ಹೋಬಳಿಯಲ್ಲಿ 398 ಮಿ.ಮೀ., ಶಿರಗುಪ್ಪಿ ಹೋಬಳಿಯಲ್ಲಿ 308 ಮಿ.ಮೀ. ಮಳೆಯಾಗಿದೆ. ಜೂನ್‌ ತಿಂಗಳಲ್ಲಿ ಹುಬ್ಬಳ್ಳಿ ಹೋಬಳಿಯಲ್ಲಿ 173 ಮಿ.ಮೀ., ಛಬ್ಬಿ 166 ಮಿ.ಮೀ., ಶಿರಗುಪ್ಪಿ 89 ಮಿ.ಮೀ., ಜು. 1ರಿಂದ 8ರವರೆಗೆ ಹುಬ್ಬಳ್ಳಿ ಹೋಬಳಿಯಲ್ಲಿ 278 ಮಿ.ಮೀ., ಛಬ್ಬಿ ಹೋಬಳಿ 268 ಮಿ.ಮೀ., ಶಿರಗುಪ್ಪಿ ಹೋಬಳಿಯಲ್ಲಿ 148 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಸಾಲ ಪಡೆಯುವ ಮತ್ತು ಪಡೆಯದ ರೈತರು ಅರ್ಜಿ ಸಲ್ಲಿಸಲು ಜು. 31 ಅಂತಿಮ ದಿನವಾಗಿದೆ. ಕೆಂಪು ಮೆಣಸಿನಕಾಯಿ (ನೀರಾವರಿ ಮತ್ತು ಮಳೆ ಆಶ್ರಿತ) ಬೆಳೆಗೆ ಅರ್ಜಿ ಸಲ್ಲಿಸಲು ಆ. 14 ಅಂತಿಮ ದಿನವಾಗಿದೆ.
•ಶಿವಶಂಕರ ಕಂಠಿ
Advertisement

Udayavani is now on Telegram. Click here to join our channel and stay updated with the latest news.

Next