Advertisement

ತಂದೆಗೆ ಬೇಡವಾದ ಮಗಳಿಗೆ ಕೋರ್ಟ್‌ ಆಸರೆ

06:00 AM Jun 18, 2018 | Team Udayavani |

ಬೆಂಗಳೂರು: ಮನೆಬಿಟ್ಟುಹೋದ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್‌ ಮೊರೆ ಹೋದ ತಂದೆ, ಕೋರ್ಟ್‌ ಆ ಕೆಲಸ ಮಾಡಿದಾಗ ಆಕೆ ತನ್ನ ಮನೆಗೆ ಬರುವುದೇ ಬೇಡ ಎಂದ. ಇದರಿಂದ ಕಂಗಾಲಾದ ಯುವತಿಗೆ ಕೊನೆಗೆ ನ್ಯಾಯಾಲಯವೇ ಆಸರೆ ಕೊಡಿಸಿದ ಪ್ರಸಂಗ ಇದು.

Advertisement

ಮಗಳು ಕಳೆದುಹೋಗಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಆಕೆ ಪತ್ತೆಯಾಗಿಲ್ಲ. ಆದ್ದರಿಂದ ಆಕೆಯನ್ನು ಹುಡುಕಿಕೊಡಿ. ನನ್ನ ವಶಕ್ಕೆ ಒಪ್ಪಿಸಿ ಎಂದು ತಂದೆಯೊಬ್ಬ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲಿಲಿಸಿದ್ದರು. ಅದರಂತೆ ಹೈಕೋರ್ಟ್‌ ಸೂಚನೆಯಂತೆ ಪೊಲೀಸರು ತನ್ನ ಅತ್ತೆ ಮನೆ ಸೇರಿದ್ದ ಮಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ತಂದೆ-ಮಗಳನ್ನು ಕರೆಸಿದ ನ್ಯಾಯಮೂರ್ತಿಗಳು, ಮಗಳನ್ನು ಕರೆದೊಯ್ಯುವಂತೆ ತಂದೆಗೆ ಸೂಚಿಸಿದರು.

ಅಷ್ಟರಲ್ಲಿ ತಂದೆಯ ವರಸೆ ಬದಲಾಯಿತು. ನಾನು ಹೇಳಿದ ಹುಡುಗನನ್ನು ಮದುವೆಯಾಗುವುದಾದರೆ ಮಾತ್ರ ಪುತ್ರಿಯನ್ನು ಮನೆಗೆ ಕರೆದೊಯ್ಯುತ್ತೇನೆ ಎಂದು ಹೇಳಲಾರಂಭಿಸಿದ. ಆದರೆ, ಪುತ್ರಿ, ನಾನು ಮದುವೆಯಾಗುವುದಾದರೆ ಮಾವನನ್ನು ಮಾತ್ರ ಎಂದು ಪಟ್ಟುಹಿಡಿದಳು. ಹೀಗಾಗಿ ನ್ಯಾಯಮೂರ್ತಿಗಳು ಇಬ್ಬರನ್ನು ತಮ್ಮ ಕೊಠಡಿಗೆ ಕರೆಸಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಇಬ್ಬರೂ ತಮ್ಮ ಪಟ್ಟು ಸಡಿಲಿಸಲಿಲ್ಲ. ನಾನಾ ರೀತಿಯಲ್ಲಿ ಬುದ್ಧಿವಾದ ಹೇಳಿದರೂ ಒಪ್ಪಲಿಲ್ಲ.

ಕೊನೆಗೆ ನ್ಯಾಯಮೂರ್ತಿಗಳೇ ಆಕೆಗೆ ಒಂದು ದಾರಿ ತೋರಿಸಲು ಮುಂದಾದರು. ತನ್ನ ಮಾತಿಗೆ ಒಪ್ಪದ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಹೆತ್ತ ತಂದೆಯೇ ನಿರಾಕರಿಸುತ್ತಿರುವುದರಿಂದ ನ್ಯಾಯಪೀಠವೇ ಪೋಷಕರ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ತೀರ್ಮಾನಿಸಿದರು. ಅಲ್ಲದೆ, ಆಕೆಯ ಭವಿಷ್ಯದ ದೃಷ್ಟಿಯಿಂದ ಅವರ ಅತ್ತೆಯ ಮನೆಗೆ ಕಳುಹಿಸಿಕೊಡುವಂತೆ ಪೊಲೀಸರಿಗೆ ನಿರ್ದೇಶಿಸಿತು. ಯುವತಿಯನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು ಎಂದು ಆಕೆಯ ಅತ್ತೆಗೆ ಸೂಚನೆಯನ್ನೂ ನೀಡಿ ಅರ್ಜಿ ಇತ್ಯರ್ಥ ಪಡಿಸಿತು.

ಪ್ರಕರಣ ಏನು?:
ಮಂಡ್ಯ ಜಿಲ್ಲೆಯ ವಿಶ್ವನಾಥ್‌ ಅವರ ಮಗಳು ಪವಿತ್ರ  ದ್ವೀತಿಯ ಪಿಯುಸಿ ಉತ್ತೀರ್ಣಳಾಗಿದ್ದು, ಮನೆಯಲ್ಲಿಯೇ ಇದ್ದಳು. ಕಳೆದ  ನಾಲ್ಕೈದು ತಿಂಗಳ ಹಿಂದೆ ವಿಶ್ವನಾಥ್‌ ಅವರ ಹಿರಿಯ ಸಹೋದರಿ ಮನೆಗೆ ಬಂದು, ತಮ್ಮ ಮಗ ಶಿವಕುಮಾರ್‌ಗೆ ಪವಿತ್ರಳನ್ನು ವಿವಾಹ ಮಾಡಿಕೊಡುವಂತೆ ಕೇಳಿದ್ದರು. ಆದರೆ, ಇದಕ್ಕೆ ವಿಶ್ವನಾಥ್‌ ದಂಪತಿ ಒಪ್ಪಲಿಲ್ಲ. ಯಾವುದೇ ಕಾರಣಕ್ಕೂ ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕಳುಹಿಸಿದ್ದರು. (ಎಲ್ಲರ  ಹೆಸರುಗಳನ್ನು ಬದಲಾಯಿಸಲಾಗಿದೆ)

Advertisement

ಈ ಮಧ್ಯೆ ಮೇ 17ರಂದು ಪದವಿ ಕಾಲೇಜಿಗೆ ಸೇರುವ ಸಲುವಾಗಿ ಪ್ರವೇಶಾತಿ ಪತ್ರ ತರುವುದಾಗಿ ಮನೆಯಿಂದ ತೆರಳಿದ್ದ ಪವಿತ್ರ ಮನೆಗೆ ವಾಪಾಸ್‌ ಬಂದಿರಲಿಲ್ಲ. ಇದರಿಂದ ಕಂಗಾಲಾದ ವಿಶ್ವನಾಥ್‌ ದಂಪತಿ, ಮಗಳ ಸ್ನೇಹಿತರನ್ನು ವಿಚಾರಿಸಿದರೂ ಆಕೆಯ ಬಗ್ಗೆ ಮಾಹಿತಿ ಸಿಗಲಿಲ್ಲ. ಮಾರನೇ ದಿನ ಕಾಲೇಜು ಸೇರಿ ಹಲವು ಕಡೆ ಹುಡುಕಾಡಿದ ಬಳಿಕ ತಮ್ಮ ಅಕ್ಕನ ಮನೆಯ ಬಳಿ ತೆರಳಿರಬಹುದೇ ಎಂದು ಹೋಗಿ ನೋಡಿದಾಗ ಪವಿತ್ರ ಅಲ್ಲಿರುವುದು ಕಂಡು ಬಂತು. ಮನೆಗೆ ವಾಪಸ್‌ ಬರುವಂತೆ ಕರೆದರೂ ಒಪ್ಪದ ಆಕೆ ಶಿವಕುಮಾರ್‌ ಜತೆ ಮದುವೆ ಮಾಡಿಸಲು ಒಪ್ಪುವುದಾದರೆ ಮಾತ್ರ ಬರುವುದಾಗಿ ಹೇಳಿದ್ದಳು. ಶಿವಕುಮಾರ್‌ ಜತೆ ಚರ್ಚಿಸಿ ಕರೆದೊಯ್ಯೋಣ ಎಂದರೆ ಆತ ಕೂಡ ಮನೆಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಲಸೂರು ಪೊಲೀಸ್‌ ಠಾಣೆಯಲ್ಲಿ ಮಗಳು ನಾಪತ್ತೆ ಬಗ್ಗೆ  ದೂರು ನೀಡಿದ್ದರು. ಅಷೇ ಅಲ್ಲದೆ ಮಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಆದೇಶಿಸುವಂತೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next