ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ನ್ಯಾಯಾಲಯ ಸಮನ್ಸ್ ನೀಡಿರುವುದರಿಂದ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಡಿಕೆ ಶಿವಕುಮಾರ್ ಸೇರಿ ಐದು ಮಂದಿಗೆ ದೆಹಲಿ ಜನಪ್ರತಿನಿಧಿಗಳ ಕೋರ್ಟ್ ನಿಂದ ಸಮನ್ಸ್ ನೀಡಲಾಗಿದೆ. ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಆಂಜನೇಯ, ಹನುಮಂತಯ್ಯ, ರಾಜೇಂದ್ರಗೆ ಸಮನ್ಸ್ ಜಾರಿಯಾಗಿದೆ. ಪ್ರಕರಣದ ಆರೋಪಪಟ್ಟಿ ಸಲ್ಲಿಕೆ ಬಳಿಕ ಈ ಬೆಳವಣಿಗೆ ನಡೆದಿದೆ.
ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ತಕ್ಷಣ ಕೈಗೆತ್ತಿಕೊಂಡರೆ ಡಿ.ಕೆ.ಶಿವಕುಮಾರ್ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವುದು ಕಷ್ಟವಾಗಬಹುದು ಎಂಬುದು ಕಾಂಗ್ರೆಸ್ ನಾಯಕರ ಆತಂಕ.
ಇಂಥ ಪ್ರಕರಣಗಳಲ್ಲಿ ಆರೋಪಿಗಳ ಖುದ್ದು ಉಪಸ್ಥಿತಿ ಗೆ ನ್ಯಾಯಾಲಯ ಬಯಸಿದರೆ ಶಿವಕುಮಾರ್ ಅವರ ಈ ವರ್ಷದ ಬಹುತೇಕ ಸಮಯ ದಿಲ್ಲಿಯಲ್ಲಿ ವಿಚಾರಣೆ ಎದುರಿಸುವುದಕ್ಕೆ ಕಳೆದು ಹೋಗುವ ಸಂಭವ ಹೆಚ್ಚು.
ಹೀಗಾಗಿ ಕಾಂಗ್ರೆಸ್ ಗೆ ಸಂಘಟನಾತ್ಮಕವಾಗಿ ಒಂದಿಷ್ಟು ಕಿರಿಕಿರಿ ಸೃಷ್ಟಿಯಾಗಬಹುದು. ಚುನಾವಣಾ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯೇ ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.