Advertisement

PM ಮೋದಿ ಭಾವಚಿತ್ರ ಕುರಿತಾಗಿ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಕೆ; ಕೆ.ಎಸ್. ಈಶ್ವರಪ್ಪ

07:40 PM Apr 06, 2024 | Shreeram Nayak |

ಸಾಗರ: ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕದಂತೆ ಕುತಂತ್ರ ಮಾಡಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದ್ದೇನೆ  ಎಂದು  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಘೋಷಿತ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

Advertisement

ಇಲ್ಲಿನ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ  ಮಾತನಾಡಿದ ಅವರು ನರೇಂದ್ರ ಮೋದಿ ವಿಶ್ವನಾಯಕ. ದೇಶದ ಪ್ರತಿಯೊಬ್ಬ ಜನಸಾಮಾನ್ಯರೂ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದ ಕೋಟ್ಯಾಂತರ ಜನರು ಕನಸು ಕಾಣುತ್ತಿದ್ದಾರೆ. ಅಂತಹವರ ಫೋಟೋವನ್ನು ನಾನು ಬಳಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಇಷ್ಟಾಗ್ಯೂ ಕೆಲವರು ನಾನು ಮೋದಿ ಅವರ ಭಾವಚಿತ್ರ ಹಾಕದಂತೆ ಕುತಂತ್ರದ ಮೂಲಕ ತಡೆಯಾಜ್ಞೆ ತರಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಹಾಕಿಕೊಂಡಿದ್ದೇನೆ. ನಾನು ಲೋಕಸಭೆ ಚುನಾವಣೆ ಗೆದ್ದ ನಂತರ ಮತ್ತೆ ಮೋದಿಯವರ ಜೊತೆಗೆ ಹೋಗುತ್ತೇನೆ ಎಂದು ಹೇಳಿದರು.

ಬಿಜೆಪಿ ಮತ್ತು ನನ್ನದು ತಾಯಿಮಗುವಿನ ಸಂಬಂಧ ಇದ್ದಂತೆ. ೪೦ ವರ್ಷದ ಬಾಂಧವ್ಯವನ್ನು ಬಿಟ್ಟು ಬಂದಿದ್ದಕ್ಕೆ ನನಗೆ ನೋವಾಗಿದೆ. ಆದರೆ ಮಹತ್ವದ ಕೆಲಸವೊಂದನ್ನು ಸಾಧಿಸಬೇಕಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿಜೆಪಿ ಬಿಟ್ಟು ಸ್ಪರ್ಧೆ ಮಾಡಿದ್ದೇನೆ. ನನ್ನ ಸ್ಪರ್ಧೆ ದೇಶ ಮತ್ತು ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಪಕ್ಷದ, ಪರಿವಾರದ ಅನೇಕ ಹಿರಿಯರು ನನಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಈ ಚುನಾವಣೆ ಜನಬಲವೋ, ಹಣಬಲವೋ ಎನ್ನುವುದನ್ನು ಸಾಬೀತು ಮಾಡುತ್ತದೆ. ಹಣ ಮತ್ತು ಧರ್ಮದ ನಡುವೆ ನಡೆಯುತ್ತಿರುವ ಧರ್ಮ ಯುದ್ಧದಲ್ಲಿ ಅಂತಿಮವಾಗಿ ಧರ್ಮಕ್ಕೆ ಜಯ ಸಿಗುತ್ತದೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಪ್ರಕಾಶ್ ಕುಂಠೆ, ಪ್ರಮುಖರಾದ ಎಸ್.ಎಲ್.ಮಂಜುನಾಥ್, ಸತೀಶ್ ಗೌಡ ಅದರಂತೆ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ಸುರೇಶ್ ವಾಟಗೋಡು, ಉಮೇಶ್ ಚೌಟಗಿ, ಅಣ್ಣಪ್ಪ, ಸವಿತಾ ಗೋಪಾಲ್, ನಾಗರಾಜ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next