ಚೆನ್ನೈ: ಕರ್ನಾಟಕದ ಬಿಡದಿಯಲ್ಲಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಅವರ ವಿರುದ್ಧದ ಪ್ರಕರಣದಲ್ಲಿ ಆಗಾಗ ಹೇಳಿಕೆ ಬದಲಿಸುತ್ತಿರುವುದರಿಂದ ಕೋಪೋದ್ರಿಕ್ತಗೊಂಡ ನ್ಯಾಯಪೀಠ ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸುವುದಾಗಿ ಎಚ್ಚರಿಕೆ ನೀಡಿದೆ. ಬುಧವಾರದ ಒಳಗಾಗಿ ತಪ್ಪು ಸರಿಪಡಿಸಬೇಕು ಎಂದು ತಾಕೀತು ಮಾಡಿದೆ.
ಜಗತಾಲಪ್ರತಾಪನ್ ಎಂಬುವರು ಸ್ವಾಮಿ ನಿತ್ಯಾನಂದ ವಿರುದ್ಧ ಮದುರೆಯಲ್ಲಿರುವ ಮಠವನ್ನು ಅತಿಕ್ರಮಿಸದಂತೆ ನೋಡಿಕೊಳ್ಳಲು ತಮಿಳುನಾಡು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾ.ಆರ್.ಮಹಾದೇವನ್ ನೇತೃತ್ವದ ಪೀಠ ಈ ಎಚ್ಚರಿಕೆ ನೀಡಿದೆ.
ಜಗತಾಲಪ್ರತಾಪನ್ ತಮ್ಮ ಅರ್ಜಿಯಲ್ಲಿ ಯಾವತ್ತಿಗೂ ಮದುರೆಯಲ್ಲಿರುವ ಮಠದ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ. ಈ ಬಗ್ಗೆ ನ್ಯಾಯಪೀಠ ನಿತ್ಯಾನಂದಗೆ ಪದೇ ಪದೆ ಎಚ್ಚರಿಕೆ ನೀಡಿತ್ತು.
“ಮಂಗಳವಾರವೇ ಅವರನ್ನು (ನಿತ್ಯಾನಂದ)ಬಂಧಿಸಿ ಹಾಜರುಪಡಿಸಬೇಕು. ಅವರು ಕಾನೂನಿಗಿಂತ ಮೇಲ್ಪಟ್ಟವರಲ್ಲ. ಅವರ ವಿರುದ್ಧದ ಆರೋಪಗಳ ಬಗ್ಗೆ ಪದೇ ಪದೆ ಹೇಳಿಕೆ ಬದಲು ಮಾಡುತ್ತಿದ್ದಾರೆ’ ಎಂದು ನ್ಯಾಯಮೂರ್ತಿ ಮಹಾದೇವನ್ ಪೊಲೀಸರಿಗೆ ನಿರ್ದೇಶನ ನೀಡಿದರು.
ನ್ಯಾಯಪೀಠ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸ್ವಾಮಿ ನಿತ್ಯಾನಂದ ಪರ ವಕೀಲರು ತಮ್ಮ ಕಕ್ಷಿದಾರರ ವಿರುದ್ಧ ಬಂಧನ ವಾರಂಟ್ ಹೊರಡಿಸಬಾರದು. ಉಂಟಾಗಿರುವ ತಪ್ಪುಗಳನ್ನು ಪ್ರಕರಣದ ವಿಚಾರಣೆ ನಡೆಯಲಿರುವ ಬುಧವಾರದ ಒಳಗಾಗಿ ಸರಿಪಡಿಸಲಾಗುತ್ತದೆ ಎಂದು ವಾಗ್ಧಾನ ಮಾಡಿದರು. ಅದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಮೂರ್ತಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.