ಬೆಂಗಳೂರು: ಕ್ರೀಡಾ ಕೋಟಾದಡಿ ಅರ್ಹತೆ ಇದ್ದರೂ ವೈದ್ಯಕೀಯ ಸೀಟು ನೀಡದ ಕಾರಣಕ್ಕೆ ಅಂತಾರಾಷ್ಟ್ರೀಯ ಚೆಸ್ ಪಟು ಸಂಜನಾ ರಘುನಾಥ್ ಅವರಿಗೆ ಪರಿಹಾರ ರೂಪದಲ್ಲಿ 10 ಲಕ್ಷ ರೂ. ಪಾವತಿಸುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ತಮಗೆ ಆಗಿರುವ ಅನ್ಯಾಯ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಸಂಜನಾ ರಘುನಾಥ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಮುಖ್ಯ ನ್ಯಾ| ಎನ್.ವಿ. ಆಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಪ್ರಕಟಿಸಿದೆ.
ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪು ಪ್ರಕಟಿಸಿದ ನ್ಯಾಯಪೀಠ, ಅರ್ಜಿದಾರರು 2018ರಲ್ಲಿ ಏಷ್ಯಾ ಯುವ ಚೆಸ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಅವರು ಕ್ರೀಡಾ ಕೋಟಾದ ಸೀಟು ಪಡೆಯುವ ಅರ್ಹತೆಗಳಲ್ಲಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಲಾಗಿದೆ. ನಿಯಮಗಳ ಪ್ರಕಾರ ಅದು ತಪ್ಪು ಮತ್ತು ಆ ವರ್ಗೀಕರಣ ಊರ್ಜಿತವಾಗದು. ವರ್ಗೀಕರಣ ಸಂಬಂಧ 2023ರ ಜೂ.23ರಂದು ಹೊರಡಿಸಿರುವ ಸುತ್ತೋಲೆ 2006ರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆದೇಶದಲ್ಲಿ ಹೇಳಿದೆ.
ಪಿ-1 ಶ್ರೇಣಿಯ ಅಭ್ಯರ್ಥಿಯಾಗಿ ಪ್ರವೇಶ ಪಡೆಯಲು ಅರ್ಜಿದಾರರನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗಿದೆ. ಹಾಗಾಗಿ ಅವರು 10 ಲಕ್ಷ ರೂ. ಪರಿಹಾರಕ್ಕೆ ಅರ್ಹರು, ಸರಕಾರ ಆರು ವಾರಗಳಲ್ಲಿ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?
ಸಂಜನಾ ರಘುನಾಥ್ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚೆಸ್ ಟೂರ್ನಿಗಳಲ್ಲಿ ಭಾಗವಹಿಸಿದ್ದರು. 2019ರಲ್ಲಿ 13 ವರ್ಷದೊಳಗಿನ 32ನೇ ರಾಷ್ಟ್ರೀಯ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್, ಏಷ್ಯಾ ಯುವ ಚೆಸ್ ಚಾಂಪಿಯನ್‌ಶಿಪ್ ಹಾಗೂ ಕಾಮನ್ವೆಲ್ತ್ ಚೆಸ್ ಚಾಂಪಿಯನ್‌ಶಿಪ್‌ಗ್ಳಲ್ಲಿ ಭಾಗವಹಿಸಿದ್ದರು. ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದ ಅವರು 2022-23ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕಿಂಗ್ ಗಳಿಸಿದ್ದರು. ಆದರೆ ಅವರ ಅರ್ಹತೆ ತಕ್ಕಂತೆ ಕೆಇಎ ಶ್ರೇಣಿ ನೀಡದ ಕಾರಣ ಅವರು ಸೀಟು ವಂಚಿತರಾಗಿ ಹೈಕೋರ್ಟ್ ಮೊರೆ ಹೋಗಿದ್ದರು.