Advertisement

ಐಟಿಐ ಕಾಲೇಜು ಕಟ್ಟಡ ತೆರವಿಗೆ ನ್ಯಾಯಾಲಯ ಆದೇಶ

11:55 AM Jan 22, 2018 | |

ವಾಡಿ: ಅಧಿಕಾರಿಗಳು ಮಾಡಿದ ಸಣ್ಣ ಎಡವಟ್ಟಿ ನಿಂದ ನಿರ್ಮಾಣ ಹಂತದಲ್ಲಿರುವ ಸರಕಾರಿ ಕಾಲೇಜು ಕಟ್ಟಡವೊಂದನ್ನು ಧರೆಗುರುಳಿಸಬೇಕಾದ ಪ್ರಸಂಗ ಎದುರಾಗಿದ್ದು, ಸರಕಾರದ ಕೋಟ್ಯಂತರ ರೂ. ಅನುದಾನ
ನೀರುಪಾಲಾಗಲಿದೆ.

Advertisement

ರಾವೂರ-ಲಕ್ಷ್ಮೀಪುರವಾಡಿ ಗ್ರಾಮಗಳ ಮಧ್ಯೆ ನಿರ್ಮಿಸಲಾಗುತ್ತಿರುವ ವಾಡಿ ಸರಕಾರಿ ಕೈಗಾರಿಕಾ ತರಬೇತಿ
ಕೇಂದ್ರ (ಐಟಿಐ) ಕಾಲೇಜು ಕಟ್ಟಡವನ್ನು ಅನಧಿಕೃತ ಜಾಗದಲ್ಲಿ ಕಟ್ಟಲಾಗುತ್ತಿದ್ದು, ಅದನ್ನು ತೆರವುಗೊಳಿಸಿ ಜಮೀನು ಮಾಲೀಕರಿಗೆ ಭೂಮಿ ಬಿಟ್ಟುಕೊಡಬೇಕು ಎಂದು ಕೋರ್ಟ್‌ ಆದೇಶ ನೀಡಿರುವುದರಿಂದ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ.

ರಾವೂರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಸರ್ವೇ ನಂ. 177ರಲ್ಲಿನ 116.38 ಎಕರೆ ಸರಕಾರಿ
ಜಾಗದಲ್ಲಿ 4 ಎಕರೆಯನ್ನು ಕಾಲೇಜು ಕಟ್ಟಡ ಕಟ್ಟಲು ಸರಕಾರ ನೀಡಿತ್ತು. ನಬಾರ್ಡ್‌ ಯೋಜನೆಯಡಿ ಮಂಜೂರಾದ ಒಟ್ಟು 3 ಕೋಟಿ ರೂ. ಅನುದಾನದಲ್ಲಿ ವಾಡಿ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ದಾಖಲೆಗಳ ಸಮೇತ ಜಾಗ ಪರಿಶೀಲನೆ ಮಾಡಿ ಕಟ್ಟಡ ಪರವಾನಿಗೆ ನೀಡಬೇಕಾದ ಅಧಿಕಾರಿಗಳು, ಉದ್ದೇಶಿತ ಜಾಗದ ಬದಲು ಗಾಂಧಿನಗರದ ಪಟ್ಟಾ ಸರ್ವೇ ನಂ. 56.57 ರಲ್ಲಿ ರೈತರೊಬ್ಬರಿಗೆ ಸೇರಿದ ಜಾಗೆ ತೋರಿಸಿದ್ದರು ಎನ್ನಲಾಗಿದೆ.

ಕಾಮಗಾರಿ ಆರಂಭವಾದ ವೇಳೆ ಎಚ್ಚೆತ್ತ ಜಮೀನು ಮಾಲೀಕರಾದ ಕಮಲಾಬಾಯಿ ಶರಣಪ್ಪ, ಬಸಣ್ಣ ನಾಗಪ್ಪ ಹಾಗೂ ಅಮರೇಶ ಸಿದ್ರಾಮಪ್ಪ ಎನ್ನುವರು ತಮ್ಮ ಮೂಲ ದಾಖಲೆಗಳೊಂದಿಗೆ ಬಂದು ಅಧಿಕಾರಿಗಳೊಂದಿಗೆ ತಕರಾರು
ತೆಗೆದಿದ್ದರು ಎನ್ನಲಾಗಿದೆ. ಈ ವೇಳೆ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. ಅನ್ಯಾಯ ಪ್ರಶ್ನಿಸಿ ರೈತರು ಕೋರ್ಟ್‌ ಮೊರೆ ಹೋಗಿದ್ದರು.

ಸುದೀರ್ಘ‌ ವಿಚಾರಣೆ ನಡೆಸಿದ ನ್ಯಾಯಾಲಯ 2017 ಡಿಸೆಂಬರ್‌ 6ರಂದು ಅಂತಿಮ ತೀರ್ಪು ನೀಡಿದ್ದು, ಎರಡು ತಿಂಗಳೊಳಗಾಗಿ ಕಟ್ಟಡ ತೆರವುಗೊಳಿಸಿ ಜಮೀನು ಬಿಟ್ಟುಕೊಡಬೇಕು ಎಂದು ಸಂಬಂಧಿಸಿದ ಸರಕಾರಿ ಅಧಿಕಾರಿಗಳಿಗೆ ಆದೇಶ ನೀಡಿದೆ. ಜಮೀನು ಉಳಿಸಿಕೊಳ್ಳಲು ಕಳೆದ ಮೂರ್‍ನಾಲ್ಕು ವರ್ಷಗಳಿಂದ ನ್ಯಾಯಾಲಕ್ಕೆ ಅಲೆಯುತ್ತಿದ್ದ ರೈತರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆದರೆ ಬೇಜವಾಬ್ದಾರಿ ಅಧಿಕಾರಿಗಳ ದೋರಣೆಗೆ ಸರಕಾರದ ಕೋಟ್ಯಂತರ ರೂ. ಅನುದಾನ ಮಣ್ಣುಪಾಲಾಗಿದೆ. ಜತೆಗೆ ಸಮಯ ಹಾಳಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next