Advertisement

ಪತ್ನಿಗೆ ಹಲ್ಲೆ ಮಾಡಿದ ಪ್ರಕರಣ : ಪತಿಗೆ 3 ವರ್ಷ ಕಠಿನ ಶಿಕ್ಷೆ , 19,500 ರೂ. ದಂಡ

05:35 PM Sep 19, 2021 | Team Udayavani |

ಮಹಾನಗರ : ಎರಡು ವರ್ಷಗಳ ಹಿಂದೆ ಇಲ್ಲಿನ ಶಕ್ತಿನಗರದಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಗಂಭೀರ ಸ್ವರೂಪದ ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿ ಗಂಡನಿಗೆ 3 ವರ್ಷಗಳ ಕಠಿನ ಶಿಕ್ಷೆ ಮತ್ತು 19,500 ರೂ. ದಂಡ ವಿಧಿಸಿ ಮಂಗಳೂರಿನ 3ನೇ ಸಿಜೆಎಂ (ಕಿರಿಯ ವಿಭಾಗ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಶಕ್ತಿನಗರ ನಿವಾಸಿ ರಿಕ್ಷಾ ಚಾಲಕ ಶಿವಕುಮಾರ್‌ (45) ಶಿಕ್ಷೆಗೊಳಗಾದ ಆರೋಪಿ.

2019 ಫೆ. 20 ರಂದು ರಾತ್ರಿ ಶಿವಕುಮಾರ್‌ ಮನೆಗೆ ತೆರಳಿ ಪತ್ನಿ ಸಾಕಮ್ಮ (39) ಮತ್ತು ಪುತ್ರಿಗೆ ಹೀನಾಯವಾಗಿ ಬೈದಿದ್ದು, ಈ ಸಂದರ್ಭದಲ್ಲಿ ಪತ್ನಿ ಸಾಕಮ್ಮ ಮನೆಯಿಂದ ಹೊರಗೆ ಬಂದಾಗ ಶಿವ ಕುಮಾರ್‌ ಆಕೆಯ ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ ಕಬ್ಬಿಣದ ಸರಳಿನಿಂದ ತೀವ್ರವಾಗಿ ಹೊಡೆದಿದ್ದನು ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ :ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ಈ ಹಲ್ಲೆಯಿಂದ ಸಾಕಮ್ಮ ಅವರ ಎರಡೂ ಮೊಣಕೈ ಮತ್ತು ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಐಪಿಸಿ ಸೆಕ್ಷನ್‌ 341, 324, 326, 407, 506 ಅನ್ವಯ ಪ್ರಕರಣ ದಾಖಲಾಗಿತ್ತು. ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಪ್ರದೀಪ್‌ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Advertisement

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 3 ನೇ ಸಿಜೆಎಂ (ಕಿರಿಯ ವಿಭಾಗ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಧುಕರ ಭಾಗವತ್‌ ಅವರು ಶನಿವಾರ ಆರೋಪಿಗೆ ಐಪಿಸಿ 341 ಅನ್ವಯ 500 ರೂ. ದಂಡ, ಐಪಿಸಿ 324 ಅನ್ವಯ 2 ವರ್ಷ ಕಠಿನ ಸಜೆ ಮತ್ತು 9000 ರೂ. ದಂಡ ಹಾಗೂ ಐಪಿಸಿ 326 ಅನ್ವಯ 3 ವರ್ಷ ಕಠಿನ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿ ಎರಡೂ ಸೆಕ್ಷನ್‌ಗಳಡಿ ವಿಧಿಸಲಾಗಿರುವ ಶಿಕ್ಷೆಯನ್ನು ಏಕ ಕಾಲದಲ್ಲಿ ಅನುಭವಿಸುವಂತೆ ಆದೇಶಿಸಿದ್ದಾರೆ. ದಂಡ ಮೊತ್ತದಲ್ಲಿ 19,000 ರೂ. ಗಳನ್ನು ಸಂತ್ರಸ್ತೆ ಸಾಕಮ್ಮ ಅವರಿಗೆ ಹಾಗೂ 500 ರೂ. ಗಳನ್ನು ಸರಕಾರಕ್ಕೆ ಪಾವತಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ 7 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು 6 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ನೇತ್ರಾವತಿ ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next