ಉಡುಪಿ: ಅಪಘಾತಪಡಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2019ರಲ್ಲಿ ದ್ವಿಚಕ್ರ ವಾಹನ ಚಾಲಕ ಅಲೆವೂರಿನ ಭೋಜ(48) ಕುಕ್ಕಿಕಟ್ಟೆ ಮುಚ್ಲುಕೋಡು ದೇವಸ್ಥಾನದ ದ್ವಾರದ ಬಳಿಯ ಯಶಸ್ವಿ ರೆಸಿಡೆನ್ಸಿ ಎದುರು ಅತೀವೇಗದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯಲಕ್ಷ್ಮೀ ಉಮಾನಾಥ ಮಂಜ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ದೂರು ದಾಖಲಾಗಿದ್ದು, ಉಡುಪಿ ಸಂಚಾರ ಠಾಣೆಯ ವೃತ್ತ ನಿರೀಕ್ಷಕ ಮಂಜುನಾಥ ಅವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಪ್ರಕರಣದ ಆರೋಪಿ ಭೋಜನ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಆತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂ.ದಂಡ ರೂಪದ ಶಿಕ್ಷೆ ನೀಡಿ ಅ.11ರಂದು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದಾರೆ.