ಬೇಲೂರು: ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಜೆಎಂಎಫ್ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ದೇಗುಲದ ಆವರಣದಲ್ಲಿ ಕಟ್ಟಡ ನಿರ್ಮಾಣ ವಿರೋಧಿಸಿ ಬಳ್ಳೂರು ಉಮೇಶ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್, ಐತಿಹಾಸಿಕ ದೇವಾಲಯಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಪುರಾತತ್ವ ಇಲಾಖೆ ನಿಯಮ ರೂಪಿಸಿದೆ. ಆದರೆ ಈ ನಿಯಮಕ್ಕೆ ವಿರುದ್ಧವಾಗಿ ದೇವಾಲಯದ ಹಿಂಬದಿ ಪ್ರವಾಸೋದ್ಯಮ ಇಲಾಖೆಯಿಂದ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದೆ. ಇದು ನಿಯಮ ಬಾಹಿರವಾಗಿರುವುದ ರಿಂದ ಕಟ್ಟಡ ನಿರ್ಮಿಸದಂತೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದೆವು. ನ್ಯಾಯಾಲಯ ಅರ್ಜಿ ಪರಿಶೀಲಿಸಿ ಇಂದು ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.
ಎಲ್ಲರಿಗೂ ಅನುಮತಿ ನೀಡಲಿ: ಸಾರ್ವಜನಿಕರಿಗೊಂದು ಕಾನೂನು ಇಲಾಖೆಗೊಂದು ಕಾನೂನು ಸರಿಯಲ್ಲ. ಯಾವುದೇ ಇಲಾಖೆಯಿಂದಾಗಲಿ ಕಟ್ಟಡ ನಿರ್ಮಿಸುವುದೇ ಆದಲ್ಲಿ 100 ಮೀ. ನಿಯಮವನ್ನು ರದ್ದುಗೊಳಿಸಿ ನಂತರ ಕಟ್ಟಡ ಕಟ್ಟಲಿ. ಇದರಿಂದ 100 ಮೀ. ವ್ಯಾಪ್ತಿಯಲ್ಲಿನ ನಿವಾಸಿಗಳು ಮನೆ, ನಿವೇಶನ ಮಾರಲಾಗದೇ ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲಾ ಗದೇ, ಮನೆ ದುರಸ್ತಿ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಮನೆಯನ್ನು ಅಡವಿಟ್ಟು ಸಾಲ ಪಡೆಯಲೂ ಆಗದಂತ ಸ್ಥಿತಿಯಲ್ಲಿದ್ದಾರೆ. ಈ ನಿಯಮ ರದ್ದಾದರೆ ಈ ನಿವಾಸಿಗಳಿಗೆ ಅನುಕೂಲ ಆಗಲಿದೆ. ಇಲ್ಲದಿದ್ದರೆ ಯಾರೂ ಯಾವುದೇ ತರಹದ ಕಟ್ಟಡ ನಿರ್ಮಿಸುವುದು ತರವಲ್ಲ ಎಂದು ತಿಳಿಸಿದರು.
ಬೇರೆಕಡೆ ನಿರ್ಮಿಸಲಿ: ದೇವರ ರಥೋತ್ಸವದ ವೇಳೆ, ಸಾವಿರಾರು ಭಕ್ತರು ಆಗಮಿಸುತ್ತಾರೆ. ಕಡೂರಿನಿಂದ ಎತ್ತಿನಗಾಡಿಗಳಲ್ಲಿ ಆಗಮಿಸುವ ಭಕ್ತರು ಉಳಿದುಕೊಳ್ಳಲು ಹಾಗೂ ವಾಹನಗಳ ನಿಲುಗಡೆಗೆ ಸ್ಥಳದ ಕೊರತೆಯಿದೆ. ದೇಗುಲ ಹಿಂಭಾಗದಿಂದ ಮೂಡಿಗೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದೆ. ಇದರ ನಡುವೆ ಕಟ್ಟಡಗಳ ನಿರ್ಮಿಸುವುದು ಸರಿಯಲ್ಲ. ಕಿರಿದಾದ ಸ್ಥಳದಲ್ಲೇ ರಥೋತ್ಸವ ನಡೆಯುತ್ತಿದೆ. ವಸತಿಗೃಹ, ವಾಣಿಜ್ಯ ಮಳಿಗೆ ಇನ್ನಿತರ ಕಟ್ಟಡಗಳನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಿ ಎಂದರು.
ದೇಗುಲದ ಗೋಡೆಯ ಸಮೀಪ ವಿದ್ಯುತ್ ಕಂಬವಿವುದರಿಂದ ಕಳ್ಳರು ದೇಗುಲದೊಳಕ್ಕೆ ಸುಲಭವಾಗಿ ಬರುವ ಸಾಧ್ಯತೆಯಿದ್ದು, ವಿದ್ಯುತ್ ಕಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಇಲಾಖೆ ಮುಂದಾಗಬೇಕು ಎಂದರು.