Advertisement

ಕಾನ್ಫರೆನ್ಸ್‌ ಮೂಲಕವೇ ಕೋರ್ಟ್‌ ಕಲಾಪ

05:45 AM Jun 28, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಾಲಯಗಳು (ಜಿಲ್ಲಾ ಮತ್ತು ವಿಚಾರಣಾ ಕೋರ್ಟ್‌) ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಕಾರ್ಯ ನಿರ್ವಹಿಸುವಂತೆ ನಿರ್ದೇಶಿಸಿದ್ದ  ಹೈಕೋರ್ಟ್‌ ಇದೀಗ ಈ ಕುರಿತಂತೆ ಕಾನೂನು ರೂಪಿಸಿದೆ. ವಿಡಿಯೋ ಕಾನ್ಫರೆನ್ಸ್‌ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಜೂ. 8ರಂದು ನೀಡಿದ್ದ ನಿರ್ದೇಶನಗಳನ್ನೇ  “ನ್ಯಾಯಾಲಯಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್‌ ನಿಯಮಗಳು” ಹೆಸರಿನಲ್ಲಿ ಜಾರಿಗೆ ತರಲಾಗಿದೆ.

Advertisement

ರಾಜ್ಯ ಸರ್ಕಾರ ನಿಯಮಗಳಿಗೆ ಒಪ್ಪಿಗೆ ನೀಡಿ ಜೂ. 25 ರಂದು ಅಧಿಸೂಚನೆ ಹೊರಡಿಸಿದ್ದು ಅಧಿಕೃತವಾಗಿ ಜಾರಿಯಾಗಿವೆ.  ನೂತನ  ನಿಯಮಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್‌ ಸೌಲಭ್ಯವನ್ನು ಪಡೆದುಕೊಳ್ಳುವುದು, ಬಳಸುವುದು, ಪ್ರಕ್ರಿಯೆ ಸೇರಿದಂತೆ ವಕೀಲರು ಮತ್ತು ಕಕ್ಷಿದಾರರು ಈ ಹೊಸ ವ್ಯವಸ್ಥೆಗೆ ಹೇಗೆ ಹೊಂದಿಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ.  ಪ್ರಮುಖವಾಗಿ, ಕೋರ್ಟ್‌ಗಳು ನ್ಯಾಯದಾನ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ಈ ವ್ಯವಸ್ಥೆಯನ್ನು ಬಳಸಬಹುದು.

ಸಿಪಿಸಿ, ಸಿಆರ್‌ಪಿಸಿ, ನ್ಯಾಯಾಂಗ ನಿಂದನೆ, ಸಾಕ್ಷ್ಯ ಸೇರಿದಂತೆ ಎಲ್ಲ ಪ್ರಕ್ರಿಯೆಗಳಲ್ಲೂ ವಿಡಿಯೋ ಕಾನ್ಫರೆನ್ಸ್‌  ಮೂಲಕವೇ ನಡೆಸಬಹುದು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಲು ಇಂಟರ್‌ನೆಟ್‌ ಸಮಸ್ಯೆ ಇರುವ ಹಳ್ಳಿಗಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಹತ್ತಿರದ ಕೋರ್ಟ್‌ನಲ್ಲಿ ಉಪಕರಣ ಸೇರಿದಂತೆ ಸೂಕ್ತ ವ್ಯವಸ್ಥೆ, ಸೌಲಭ್ಯ  ಒದಗಿಸಬೇಕು. ಕೋರ್ಟ್‌ ಪ್ರಕ್ರಿಯೆಯಲ್ಲಿ ಇವುಗಳನ್ನು ಬಳಸಲು ಕೋಆರ್ಡಿನೇಟರ್‌ (ಸಮನ್ವಯಕಾರ) ಇರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಪರಿಷ್ಕೃತ ಮಾರ್ಗಸೂಚಿ: ಹಿಂದಿನಂತೆ ಕೋರ್ಟ್‌ ಪ್ರವೇಶ ವಕೀಲರಿಗೆ, ಸಿಬ್ಬಂದಿಗೆ ಸೀಮಿತಗೊಳಿಸಲಾಗಿದೆ, ಸಾರ್ವಜನಿಕರಿಗೆ ಪ್ರವೇಶದ ನಿರ್ಬಂಧ ಮುಂದುವರಿಯಲಿದೆ. ಸಿಬ್ಬಂದಿ, ವಕೀಲರು ಸೇರಿ ಎಲ್ಲರೂ ಮಾಸ್ಕ್ ಧರಿಸುವುದು  ಕಡ್ಡಾಯಗೊಳಿಸಲಾಗಿದೆ. ಆದರೆ ಕೋರ್ಟ್‌ ಪ್ರವೇಶಿಸುವ ಪ್ರತಿಯೊಬ್ಬರಿಗೂ ಆರೋಗ್ಯ ಸೇತು ಆ್ಯಪ್‌ ಕಡ್ಡಾಯಗೊಳಿಸಲಾಗಿದೆ. ಹೈಕೋರ್ಟ್‌ನಲ್ಲಿ ಮಾತ್ರ ವಕೀಲರ ಜೊತೆ ಅವರ ಒಬ್ಬ ಕ್ಲರ್ಕ್‌ ಗೂ ಕೋರ್ಟ್‌ ಆವರಣ ಪ್ರವೇಶಕ್ಕೆ ಅವಕಾಶ  ನೀಡಲಾಗಿದೆ.

ಹೈಕೋರ್ಟ್‌ನಲ್ಲಿ ಇ-ಫೈಲಿಂಗ್‌ ಮತ್ತು μಸಿಕಲ್‌ ಫೈಲಿಂಗ್‌ಗೆ ಅವಕಾಶ ಮುಂದುವರಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಿಗೆ ಮುಂದಿನ ಎರಡು ವಾರಗಳ ಕಾಲ ಬೆಳಗ್ಗೆ 10, ಮಧ್ಯಾಹ್ನ 10 ಪ್ರಕರಣಗಳ  ವಿಚಾರಣೆಗೆ ಅವಕಾಶ ಮುಂದುವರಿಸಲಾಗಿದೆ. ವಕೀಲರು ಖುದ್ದು ವಾದ ಮಂಡಿಸಬಹುದು, ಅಗತ್ಯಬಿದ್ದರೆ ವಿಡಿಯೋ ಕಾನ್ಫರೆನ್ಸ್‌ ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next