Advertisement

ದೇಗುಲ ಸುಪರ್ದಿಗೆ ಕಾಲಾವಕಾಶ ಕೇಳಿದ್ದ ಅರ್ಜಿ ವಜಾ

02:35 PM Sep 22, 2019 | Team Udayavani |

ಬಂಗಾರಪೇಟೆ: ತಾಲೂಕಿನ ಶ್ರೀಕ್ಷೇತ್ರ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಹಾಲಿ ಕಾರ್ಯದರ್ಶಿ ಕೆ.ವಿ. ಕುಮಾರಿ ಹಾಗೂ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್‌ ನಡುವೆ ನಡೆಯುತ್ತಿರುವ ಶೀತಲಸಮರಕ್ಕೆ ಕೆಜಿಎಫ್ ಸೆಷನ್ಸ್‌ ನ್ಯಾಯಾಲಯ ಬ್ರೇಕ್‌ ಹಾಕಿದೆ. ಇವರಿಬ್ಬರ ಜಗಳದಲ್ಲಿ ದೇಗುಲದ ಆಡಳಿತ ನಿರ್ವಹಣೆ ಇದೀಗ ಜಿಲ್ಲಾಧಿಕಾರಿಗಳ ಸಮಿತಿಗೆ ಸಿಗುವಂತಾಗಿದೆ.

Advertisement

ಶ್ರೀಕೋಟಿಲಿಂಗೇಶ್ವರ ದೇಗುಲದ ಧರ್ಮಾಧಿಕಾರಿ ಆಗಿದ್ದ ಶ್ರೀಕಮಲಸಾಂಭವ ಶಿವಮೂರ್ತಿ ಸ್ವಾಮೀಜಿ ಗಳು ಲಿಂಗೈಕ್ಯರಾದ ನಂತರ ದೇಗುಲ ಮುನ್ನಡೆಸುವ ವಿಚಾರದಲ್ಲಿ ಇವರಿಬ್ಬರ ನಡುವೆ ತಗಾದೆ ಏರ್ಪಟ್ಟಿತ್ತು. ದೇಗುಲದ ಆಸ್ತಿ ಕಿತ್ತಾಟದಿಂದ ಭಕ್ತರಿಗೆ ಬೇಸರ ಉಂಟಾಗಿತ್ತು. ಪ್ರತಿ ನಿತ್ಯ ಬರುವ ಪ್ರವಾಸಿಗರಿಗೆ ಕಿರಿಕಿರಿ ಯಾಗುತ್ತಿರುವ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲು ಮುಂದಾಗಿದ್ದರೂ ಜಿಲ್ಲೆಯ ಹಿರಿಯ ರಾಜಕಾರಣಿಗಳ ಮಧ್ಯ ಪ್ರವೇಶದಿಂದ ಸಾಧ್ಯವಾಗಿರಲಿಲ್ಲ. ಶ್ರೀಕೋಟಿಲಿಂಗೇಶ್ವರ ದೇಗುಲದ ಸ್ಥಾಪಕ ಶ್ರೀಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿಗಳು ತಮ್ಮ ಕುಟುಂಬದೊಂದಿಗೆ 1996ರಿಂದಲೂ ದೂರವಾಗಿದ್ದರು. ಬೆಂಗಳೂರಿನಲ್ಲಿದ್ದ ತನ್ನ ಆಸ್ತಿಯನ್ನು ವಿಭಾಗ ಮಾಡಿದ್ದರು. ಸ್ವಾಮೀಜಿಗಳ ನಿಧನದ ನಂತರ ಡಾ.ಶಿವಪ್ರಸಾದ್‌ ದೇವಾಲಯದ ಆಸ್ತಿ ತಮ್ಮ ವಶಕ್ಕೆ ಪಡೆಯುವುದರ ಪರ ಮತ್ತು ವಿರುದ್ಧ ಅಭಿಪ್ರಾಯಗಳು ಕೇಳಿ ಬಂದು, ಈಗ ಕೋರ್ಟ್‌ ಮೆಟ್ಟಿಲೇರಿ ದೇಗುಲದ ಉಸ್ತುವಾರಿ ಜಿಲ್ಲಾಧಿಕಾರಿ ಸಮಿತಿಗೆ ಸಿಗುವಂತಾಗಿದೆ.

ರಾಜ್ಯಪಾಲರಿಗೆ, ಕುಮಾರಿಗೆ ವಿಲ್‌ ಮಾಡಿದ್ದ ಶ್ರೀ: ಹಲವು ಬಾರಿ ಸ್ವಾಮೀಜಿಗಳೊಂದಿಗೆ ಆಸ್ತಿ ವಿವಾದಕ್ಕೆ ಬರುತ್ತಿದ್ದ ಇವರ ಕುಟುಂಬದ ಕಿರುಕುಳದಿಂದ ಬೇಸತ್ತು ಸ್ವಾಮೀಜಿ ದೇಗುಲ ಸಮಸ್ತ ಆಸ್ತಿಯನ್ನು 2002 ಏಪ್ರಿಲ್‌ 12 ರಂದು ರಾಜ್ಯಪಾಲರ ಹೆಸರಿಗೆ ವಿಲ್‌ ಬರೆದಿದ್ದರು. ನಂತರ ಈ ವಿಲ್‌ ಅನ್ನು ರದ್ದು ಮಾಡಿ 2004ರಂದು ಜನವರಿ 8 ರಂದು 30 ವರ್ಷಗಳಿಂದ ಸ್ವಾಮೀಜಿಗಳೊಂದಿಗೆ ದೇಗುಲ ನಿರ್ಮಾಣದಲ್ಲಿ ಸಹಕರಿಸಿದ್ದ ದೇಗುಲದ ಕಾರ್ಯದರ್ಶಿ ಕೆ.ವಿ. ಕುಮಾರಿ ಹೆಸರಿಗೆ ಸಮಸ್ತ ದೇವಾಲಯದ ಆಸ್ತಿಯನ್ನು ವಿಲ್‌ ಬರೆದಿದ್ದರು. ಇದೀಗ ಡಾ.ಶಿವಪ್ರಸಾದ್‌ ಮತ್ತು ಕುಮಾರಿ ನಡುವೆ ದೇವಾಲಯದ ಉತ್ತರಾಧಿಕಾರತ್ವದ ಬಗ್ಗೆ ವ್ಯಾಜ್ಯ ಏರ್ಪಟ್ಟು, ನ್ಯಾಯಾಲಯ ಮೆಟ್ಟಿಲು ಏರುವಂತಾಗಿದೆ.

ದೇವಾಲಯದ ಆಸ್ತಿ: ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲವು 14.28 ಎಕರೆಯಲ್ಲಿ ನಿರ್ಮಾಣಗೊಂಡಿದೆ. ಸರ್ವೆ ನಂ. 44ರಲ್ಲಿ 3.20 ಎಕರೆ, 52ರಲ್ಲಿ 20.5 ಗುಂಟೆ, 53 ರಲ್ಲಿ, 8 ಗುಂಟೆ, 60ರಲ್ಲಿ 5 ಎಕರೆ, 62 ರಲ್ಲಿ 4.01 ಗುಂಟೆ ಜಮೀನು ಹೊಂದಿದೆ. ಇದರಲ್ಲಿ ಕೋಟಿಲಿಂಗಗಳ ಪ್ರತಿಷ್ಠಾಪನೆ, 13 ದೇಗುಲಗಳು, ಮೂರು ಕಲ್ಯಾಣ ಮಂಟಪಗಳು, ದಿನಸಿ ಅಂಗಡಿಗಳು ಸೇರಿ 15 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

 

Advertisement

ದೇಗುಲದ ಆದಾಯದ ಮೂಲ: ಈ ದೇಗುಲಗಳಲ್ಲಿ ಒಟ್ಟು 15 ಹುಂಡಿಗಳಿದ್ದು, ಪ್ರತಿ ತಿಂಗಳು 6 ಲಕ್ಷ ರೂ. ಸಂಗ್ರಹಣೆಯಾಗುತ್ತಿದೆ. ಈ ದೇಗುಲಗಳಲ್ಲಿ ಪೂಜೆ ಸಲ್ಲಿಸುವ ಪೂಜಾರಿಗಳು 1.50 ಲಕ್ಷ ರೂ. ದೇಗುಲದ ಆಡಳಿತ ಮಂಡಳಿಗೆ ನೀಡುತ್ತಿದ್ದು, ಪೂಜೆ ಸಾಮಗ್ರಿಗಳನ್ನು ಅವರೇ ಭರಿಸಲಿದ್ದಾರೆ. ಭಕ್ತರು ಹಾಕುವ ತಟ್ಟೆ ಕಾಸು ಪೂಜಾರಿಗಳಿಗೆ ಸೇರುತ್ತದೆ. ಶನಿವಾರ, ಭಾನುವಾರ, ಸೋಮವಾರ, ಹಬ್ಬ ಹರಿದಿನಗಳಲ್ಲಿ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಪ್ರತಿದಿನ ದೇವಾಲಯಕ್ಕೆ 4 ಸಾವಿರ ಭಕ್ತರು ಹಾಗೂ ಉಳಿದ ದಿನಗಳಲ್ಲಿ 1500 ಭಕ್ತರು ಬರುತ್ತಿದ್ದಾರೆ. ಸಾಮಾನ್ಯ ಪ್ರವೇಶ ಟಿಕೆಟ್‌ ದರ 20 ರೂ., ವಿಶೇಷದರ್ಶನ 50 ರೂ. ಸೇರಿ ಪ್ರತಿ ದಿನ 50 ಸಾವಿರ ರೂ. ಆದಾಯ ಬರುತ್ತಿದೆ.

ವಾರ್ಷಿಕ ವರಮಾನ: ಶ್ರೀಕೋಟಿ ಲಿಂಗೇಶ್ವರ ದೇಗುಲದಲ್ಲಿ ಶಿವಲಿಂಗಳ ಪ್ರತಿಷ್ಠಾನೆ ನಡೆಯಲಿದ್ದು, ಹೆಗ್ಗಡ ದೇವನ ಕೋಟೆಯಿಂದ ಖರೀದಿ ಮಾಡಲಿದ್ದು, 8 ಸಾವಿರ ರೂ., 9 ಸಾವಿರ ರೂ., 30 ಸಾವಿರ ರೂ., 60 ಸಾವಿರ ರೂ. ಹಾಗೂ ಲಕ್ಷ ರೂ. ಬೆಲೆಯ ಲಿಂಗಗಳನ್ನು ಭಕ್ತರಿಂದ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು 10 ಲಕ್ಷ ರೂ. ಆದಾಯ ಬರುತ್ತಿದೆ. ದೇವಾಲಯಗಳಲ್ಲಿ ಭಕ್ತರಿಂದ ಅಭಿಷೇಕದಿಂದ ತಿಂಗಳಿಗೆ ಒಂದು ಲಕ್ಷ ರೂ. ಬರಲಿದೆ. ದ್ವಿಚಕ್ರ ವಾಹನಗಳು ಸೇರಿ ಎಲ್ಲಾ ತರಹದ ವಾಹನಗಳ ಪೂಜೆಯಿಂದ ಪ್ರತಿ ತಿಂಗಳ 10 ಸಾವಿರ ರೂ. ವರಮಾನ ಬರುತ್ತಿದೆ.

ದೇಗುಲಕ್ಕೆ ಬರುವ ಆದಾಯ: ದೇಗುಲದಲ್ಲಿ ಪ್ರಸಾದ ಮಾರಾಟ ಮಾಡಲು 20 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ, ವಾಹನಗಳ ಪಾರ್ಕಿಂಗ್‌ 20 ಲಕ್ಷ ರೂ., ದೇಗುಲದ ಒಳಗೆ ಪೋಟೋ ಹಿಡಿಯಲು 8 ಲಕ್ಷ ರೂ., 2 ಶೌಚಾಲಯಗಳು ಬಳಕೆಯಿಂದ 2 ಲಕ್ಷ ರೂ., ಶ್ರೀಸಾಂಭವ ಶಿವಮೂರ್ತಿ, ಶ್ರೀಅನ್ನಪೂರ್ಣೇಶ್ವರಿ ಹಾಗೂ ಶ್ರೀಸಾಯಿ ಕಲ್ಯಾಣ ಮಂಟಪ ಹಾಗೂ ಭಕ್ತರಿ ಗಾಗಿ ಇರುವ 10 ಕೊಠಡಿಗಳಿಂದ 6 ಲಕ್ಷ ರೂ., ದೇಗುಲದ ಅಧೀನದಲ್ಲಿರುವ 40 ದಿನಸಿ ಅಂಗಡಿ ಗಳಿಂದ ಪ್ರತಿದಿನ 600 ರೂ. ನಂತೆ ವರ್ಷಕ್ಕೆ 80 ಲಕ್ಷ ರೂ. ಬಾಡಿಗೆ ಬರುತ್ತಿದೆ. ದೇಗುಲದ ಆವರಣದಲ್ಲಿ ಭಕ್ತರು ಇಡುವ ಕ್ಯಾಮೆರಾ ಬಿಲ್‌ನಿಂದ 4 ಲಕ್ಷ ರೂ., ಚಪ್ಪಲಿ ಕಾಯ್ದಿರಿ ಸುವ ಅಂಗಡಿಯಿಂದ ಒಂದು ಲಕ್ಷ ರೂ. ಆದಾಯ ಬರುತ್ತಿದೆ.

ದೇಗುಲ ನಿರ್ವಹಣೆ ಖರ್ಚು: ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಶ್ರೀಕೋಟಿ ಲಿಂಗೇಶ್ವರ ದೇಗುಲದಲ್ಲಿ ಪ್ರತಿ ದಿನ 500 ರಿಂದ 600 ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ಇದೆ. ಇದಕ್ಕೆ ಪ್ರತಿ ತಿಂಗಳು 12 ರಿಂದ 13 ಲಕ್ಷ ರೂ. ಖರ್ಚು ಆಗು ತ್ತಿದೆ. ದೇಗುಲದ ವಿದ್ಯುತ್‌ಬಿಲ್‌ ಒಂದು ಲಕ್ಷ, ಸಿಬ್ಬಂದಿ ಹಾಗೂ ಆಡಳಿತದ ವೆಚ್ಚ 8 ಲಕ್ಷ ರೂ., ಜನರೇಟರ್‌ ಡೀಸೆಲ್‌ಗೆ ಒಂದು ಲಕ್ಷ ರೂ. ಖರ್ಚಾಗುತ್ತಿದೆ. ಪ್ರತಿ ವರ್ಷ ದೇಗುಲ ಆವರಣದ ಕಟ್ಟಡಗಳ 50 ಸಾವಿರ ರೂ. ತೆರಿಗೆಯನ್ನು ಕಮ್ಮಸಂದ್ರ ಗ್ರಾಪಂಗೆ ಕಟ್ಟಲಾಗುತ್ತಿದೆ. ಇದೀಗ ಕೆಜಿಎಫ್ ಕೋರ್ಟ್‌ ತೀರ್ಪಿನಂತೆ ದೇಗು ಲದ ಮೇಲ್ವಿಚಾರಣೆ ಹೊಣೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಒಳಪಡಲಿದೆ. ಆದರೂ, ಡಾ.ಶಿವಪ್ರಸಾದ್‌ ಮತ್ತು ಕುಮಾರಿ ನಡು ವಿನ ವ್ಯಾಜ್ಯ ಇತ್ಯರ್ಥವಾದಾಗ ಮಾತ್ರವೇ ಕೋಟಿಲಿಂಗೇಶ್ವರ ದೇವಾ ಲಯದ ನಿರ್ವಹಣೆ ವಿಚಾರಕ್ಕೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ.

 

-ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next