ಸರಕಾರ ನ್ಯಾಯಾಂಗದ ಕಾರ್ಯದಕ್ಷತೆ ಹೆಚ್ಚಿಸತಕ್ಕ ಯೋಜನೆಗಳನ್ನು ರೂಪಿಸಬೇಕು. ಪ್ರಕರಣಗಳು ತನಿಖಾ ಹಂತದಿಂದ ಮೇಲ್ಮನವಿ ಹಂತದ ತನಕ ನಿಯತ ಅವಧಿಯಲ್ಲಿ ಇತ್ಯರ್ಥಗೊಳ್ಳುವಂತೆ ರೂಪರೇಖೆಗಳನ್ನು ಅಳವಡಿಸಬೇಕು. ಬೇಡಿಕೆಗೆ ತಕ್ಕಂತೆ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬೇಕಾದ ಮೂಲ ಸೌಕರ್ಯವನ್ನು ಒದಗಿಸಬೇಕು. ಯಾವ ಹಂತದಲ್ಲಿಯೂ ಹುದ್ದೆ ಖಾಲಿ ಇರದಂತೆ ನೋಡಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು.
ಭಾರತ ಬಹುಭಾಷೆ, ಬಹು ಜನಾಂಗ ಹಾಗೂ ಬಹು ಸಂಸ್ಕೃತಿಯುಳ್ಳ ರಾಷ್ಟ್ರ. ಆದಾಗ್ಯೂ ಅಖಂಡತೆ ಮತ್ತು ಏಕತೆಯನ್ನು ಉಳಿಸಿಕೊಂಡು ಬಂದಿದೆ. ಇದುವೆ ಭಾರತದ ವೈಶಿಷ್ಟé. ಆ ಸೇತು ಹಿಮಾಚಲ ಪರಿಯಂತ ವಿಶಾಲವಾಗಿ ಹರಡಿಕೊಂಡಿರುವ ದೇಶದಲ್ಲಿ ಅನೇಕ ರಾಜ್ಯಗಳಿವೆ. ಹಾಗೆ ಅನೇಕ ಭಾಷೆಗಳೂ ಪ್ರಚಲಿತದಲ್ಲಿವೆ. ಈ ಎಲ್ಲ ರಾಜ್ಯಗಳಿಗೂ ಅಲ್ಲಿ ವಾಸಿಸುವ ಜನ ಸಮುದಾಯಕ್ಕೂ ಒಂದೇ ನ್ಯಾಯಾಂಗ ಪದ್ಧತಿ (Judecial System). ಈ ಪರಿಕಲ್ಪನೆ ಸಾಕಾರಗೊಳ್ಳಲು ಭಾಷಾ ಸಾಮರಸ್ಯ ಅತೀ ಮುಖ್ಯ. ನ್ಯಾಯಾಲಯದಿಂದ ನಮಗೆ ಬೇಕಾಗಿರುವುದು ನ್ಯಾಯ. ನ್ಯಾಯ ಎಂದರೇನು? ಒಂದು ವಿಚಾರದ ಬಗ್ಗೆ ಆ ನಾಡಿನ ಅತ್ಯುನ್ನತ ನ್ಯಾಯ ಸ್ಥಾನ ನೀಡುವ ವ್ಯಾಖ್ಯಾನ ಅಥವಾ ತೀರ್ಪು ಎಂದಾದಾಗ ವಿಚಾರಣ ನ್ಯಾಯಾಲಯದಿಂದ ತುದಿಯ ಸರ್ವೋಚ್ಚ ನ್ಯಾಯಾಲಯದ ತನಕ ವ್ಯವಹರಿಸುವ ಅಥವಾ ಬಳಸುವ ಭಾಷೆ ಅಥವಾ ಭಾಷೆಗಳಲ್ಲಿ ಸಾಮರಸ್ಯವಿರಬೇಕೆಂಬುದು ನಿರ್ವಿವಾದ.
ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ಎಸ್.ವಿ. ರಮಣ ಅವರು ಒಂದೇ ವೇದಿಕೆಯಲ್ಲಿ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸುವ ಬಗ್ಗೆ ಸಹಮತ ವ್ಯಕ್ತಪಡಿಸಿರುವುದು ವರದಿಯಾಗಿದೆ. ಇದು ಕೇಳಲು ಮುದ ನೀಡುವ ವಾರ್ತೆ. ಕಾರ್ಯರೂಪಕ್ಕೆ ಬಂದರೆ ಹೆಮ್ಮೆಯ ವಿಚಾರವೂ ಹೌದು. ಆದರೆ ಅನುಷ್ಠಾನ ಮಾತ್ರ ಅಷ್ಟು ಸುಲಭದ ಮಾತಲ್ಲ. ನ್ಯಾಯಾಲಯದಲ್ಲಿ ಚರ್ಚಿಸುವ ವಿಚಾರಗಳೆಲ್ಲ ಕಾನೂನಿನ ವ್ಯಾಪ್ತಿಯಲ್ಲಿರುವವುಗಳು. ಕಾನೂನಿನ ಭಾಷೆ ಸಾಮಾನ್ಯ ಭಾಷೆಗಿಂತ ತುಸು ಭಿನ್ನವಾಗಿರುತ್ತದೆ. ಅದು ನಿಬಂಧನಾ ರೂಪದಲ್ಲಿರುವುದು ವಾಡಿಕೆ. ಅದನ್ನು ಬೇರೆ ಬೇರೆ ಭಾಷೆಗೆ ತರ್ಜುಮೆ ಮಾಡುವ ಹಾಗೂ ಅದರ ಮೇಲಿನ ವ್ಯಾಖ್ಯಾನದ ಸಂದರ್ಭ, ಮೂಲ ರಚನೆಯಲ್ಲಿ ಅಂತರ್ಗತವಾದ ಸ್ಥಾಯಿಭಾವವನ್ನು ವಿರೂಪಗೊಳಿಸದೆ, ಯಥಾವತ್ತಾಗಿ ಅಭಿವ್ಯಕ್ತಗೊಳಿಸುವುದು ಹಾಗೂ ಮೇಲ್ಮನವಿಯ ಕಾಲದಲ್ಲಿ ಸರ್ವೋಚ್ಚ ನ್ಯಾಯಾಲಯದ ಭಾಷೆಗೆ ಸಮನ್ವಯಗೊಳಿಸುವುದು ಬಹಳ ಕ್ಲಿಷ್ಟಕರವಾದ ಕೆಲಸ. ನಿರಂತರ ಪರಿಶ್ರಮದಿಂದ ಸಾಧ್ಯವಾದೀತು. ಆದರೆ ಅದು ಈಗ ಆದ್ಯತೆಯ ವಿಷಯವೇ?
ಪ್ರಕೃತ ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಂಗದ ದಕ್ಷತೆ ಹೆಚ್ಚಿಸುವ ತನ್ಮೂಲಕ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸರಕಾರ ಆಸಕ್ತಿ ತೋರುವುದು ವಿಹಿತ. ಭಾರತದಲ್ಲಿ ವಿಚಾರಣ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ತನಕ ಎಲ್ಲ ನ್ಯಾಯಾಲಯಗಳಲ್ಲಿ ಅಪಾರ ಸಂಖ್ಯೆಯ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಒಂದು ಅಂದಾಜಿನಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಸುಮಾರು 70,000 ಪ್ರಕರಣಗಳು ಸೇರಿ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಒಟ್ಟು 4.7ಕೋಟಿ. ಹತ್ತು ವರ್ಷಗಳಿಗಿಂತ ಹಳೆಯ ಪ್ರಕರಣಗಳೇ ಲಕ್ಷಗಟ್ಟಲೆ ಇವೆ. ಈ ಮಂದಗತಿಯ ನಿರ್ವಹಣೆಯಿಂದ ಅಪಾರ ಸಂಖ್ಯೆಯ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿಯೇ ಅಸುನೀಗುತ್ತಿದ್ದಾರೆ. ಅವರಲ್ಲಿ ಅನೇಕ ಮಂದಿ ಅಮಾಯಕರೂ ಇರಬಹುದು. ಇನ್ನು ವಿಚಾರಣ ನ್ಯಾಯಾಲಯದ ಸ್ಥಾನಮಾನ ಹೊಂದಿದ ನ್ಯಾಯಮಂಡಳಿಗಳಲ್ಲಿಯೂ ಅಪಾರ ಸಂಖ್ಯೆಯ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಇವುಗಳನ್ನು ತ್ವರಿತ ನ್ಯಾಯ ಪ್ರಧಾನದ ಉದ್ದೇಶದಿಂದಲೇ ಸ್ಥಾಪಿಸಲಾಗಿದೆ. ಇದಕ್ಕೆ ಕರ್ನಾಟಕ ಆಡಳಿತ ಮಂಡಳಿಯ ಒಂದು ಉದಾಹರಣೆ ಸಾಕು. ಸರಕಾರಿ ನೌಕರರ ದೂರನ್ನು ಆರು ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದು ಆ ಸಂಬಂಧಿತ ಕಾಯ್ದೆಯಲ್ಲಿ (1986) ಹೇಳಲಾಗಿದೆ. ಈಗ ಅಲ್ಲಿ ದಶಕಗಳಷ್ಟು ಹಳೆಯದಾದ ಪ್ರಕರಣಗಳು ಇತ್ಯರ್ಥಗೊಳ್ಳದೇ ಬಾಕಿ ಉಳಿದಿವೆ ಎಂದಾದರೆ ನಮ್ಮ ನ್ಯಾಯದಾನ ವ್ಯವಸ್ಥೆ ಎಷ್ಟು ಆಮೆಗತಿಯಲ್ಲಿದೆ ಎಂದು ನಾವು-ನೀವೆಲ್ಲರೂ ಅಂದಾಜಿಸಬಹುದು.
ಈ ಪ್ರಮಾಣದ ಪ್ರಕರಣಗಳು ನ್ಯಾಯಸ್ಥಾನಗಳಲ್ಲಿ ಬಾಕಿ ಇರುವುದು ಭಾಷೆಯ ತೊಡಕಿನಿಂದಲ್ಲವಷ್ಟೇ! ಸ್ಥಳೀಯ ಭಾಷೆಯಲ್ಲಿ ಕೋರ್ಟ್ ವ್ಯವಹಾರ ಸಾಧ್ಯವಾದರೂ ಈ ಪ್ರಕರಣಗಳನ್ನು ಇತ್ಯರ್ಥ ಗೊಳಿಸಲು ಸಾಧ್ಯವೇ? ಅಲ್ಲಿ ಅದರದ್ದೇ ಆದ ಕಲಾಪ ನಿರ್ವಹಣ ವ್ಯವಸ್ಥೆ ಇದೆ. ಬಳಕೆಯಲ್ಲಿರುವ ಕೋರ್ಟ್ ಪ್ರೊಸೀಜರ್‌ಗಳನ್ನು ಮೀರದೆ ಪ್ರಕರಣಗಳ ಇತ್ಯರ್ಥ ತ್ವರಿತಗೊಳಿಸಲು ಮತ್ತು ನ್ಯಾಯಾಂಗದ ಸಮಗ್ರ ದಕ್ಷತೆಯನ್ನು ಹೆಚ್ಚಿಸುವ ಕೆಲಸವನ್ನು ಸರಕಾರ ಮಾಡಬೇಕು. ನಮ್ಮ ಸಂವಿಧಾನ ನಿರೂಪಿಸುವಂತೆ ನ್ಯಾಯಾಂಗ ಆಡಳಿತದ ಪ್ರಧಾನ ಅಂಗ. ಆರ್ಟಿಕಲ್ (50)ರಂತೆ ಅದರ ಕಾರ್ಯನಿರ್ವಹಣೆಯೂ ಸ್ವತಂತ್ರ. ಆದರೆ ನಿರಾತಂಕ ಕಾರ್ಯ ನಿರ್ವಹಣೆಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಒದಗಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಸಕಾಲದಲ್ಲಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ಸಂವಿಧಾನದಲ್ಲಿ ನೀಡಲಾದ ಭರವಸೆಗಳಲ್ಲಿ ಒಂದು. ವಿಳಂಬಿತ ನ್ಯಾಯ ನಿಸರ್ಗದತ್ತ ನ್ಯಾಯದ ನಿರಾಕರಣೆಗೆ ಸಮ ಎಂದು ಸರ್ವೋಚ್ಚ ನ್ಯಾಯಾಲಯವೇ ಆಗಾಗ ಉಚ್ಚರಿಸುತ್ತಿದೆ. ಹಾಗಾಗಿ ಪ್ರಜಾಸತ್ತೆಯಲ್ಲಿ ನ್ಯಾಯಾಂಗವನ್ನು ಸದಾ ಸನ್ನದ್ಧ ಹಾಗೂ ಸಮರ್ಥ ಸ್ಥಿತಿಯಲ್ಲಿಡಬೇಕಾದ ಜವಾಬ್ದಾರಿ ಆಳುವ ಸರಕಾರದ ಮೇಲಿದೆ.
ಸರಕಾರ ನ್ಯಾಯಾಂಗದ ಕಾರ್ಯದಕ್ಷತೆ ಹೆಚ್ಚಿಸತಕ್ಕ ಯೋಜನೆಗಳನ್ನು ರೂಪಿಸಬೇಕು. ಪ್ರಕರಣಗಳು ತನಿಖಾ ಹಂತದಿಂದ ಮೇಲ್ಮನವಿ ಹಂತದ ತನಕ ನಿಯತ ಅವಧಿಯಲ್ಲಿ ಇತ್ಯರ್ಥಗೊಳ್ಳುವಂತೆ ರೂಪರೇಖೆಗಳನ್ನು ಅಳವಡಿಸಬೇಕು. ಬೇಡಿಕೆಗೆ ತಕ್ಕಂತೆ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬೇಕಾದ ಮೂಲ ಸೌಕರ್ಯವನ್ನು ಒದಗಿಸಬೇಕು. ಯಾವ ಹಂತದಲ್ಲಿಯೂ ಹುದ್ದೆ ಖಾಲಿ ಇರದಂತೆ ನೋಡಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ನ್ಯಾಯಾಲಯಗಳಲ್ಲಿ ನೂತನ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸುವ ಯೋಜನೆ ರೂಪಿಸಬೇಕು. ಪ್ರಗತಿ ಪರಿಶೀಲನೆಗೆ ಸ್ವಯಂ ಮೌಲ್ಯಮಾಪನದ ವ್ಯವಸ್ಥೆ ಅಳವಡಿಸು ವುದರಿಂದ ನ್ಯಾಯಾಂಗದ ಘನತೆಗೆ ಚ್ಯುತಿಯಾಗದೆ ಕಾರ್ಯಕ್ಷಮತೆ ಹೆಚ್ಚಿಸಲು ಪ್ರೇರಣೆ ದೊರಕೀತು. ಹೀಗೆ ನ್ಯಾಯಾಲಯಗಳ ಕಾರ್ಯದಕ್ಷತೆ ಹೆಚ್ಚಿ ಕಾರ್ಯ ಒತ್ತಡ ನಿಯಂತ್ರಣಕ್ಕೆ ಬರುವಾಗ ಸ್ಥಳೀಯ ಭಾಷೆಗಳ ಬಳಕೆಗೆ ಅವಕಾಶ ನೀಡಬಹುದು ಮತ್ತು ಅದನ್ನು ಒಂದು ರಾಷ್ಟ್ರೀಯ ಯೋಜನೆಯಂತೆ ಅಳವಡಿಸಿ ಭಾರತದಲ್ಲಿ ದೇಶೀಯ ಭಾಷೆಯಲ್ಲಿಯೂ ನ್ಯಾಯ ಪ್ರದಾನ ಮಾಡಲಾಗುತ್ತಿದೆ ಎಂಬ ಖ್ಯಾತಿಗೆ ಭಾಜನರಾಗಬಹುದು. ಪ್ರಕೃತ ಆದ್ಯತೆ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಇರಲಿ.
– ಬೇಳೂರು ರಾಘವ ಶೆಟ್ಟಿ