ಹೊಸದಿಲ್ಲಿ: ಆರೆಸ್ಸೆಸ್ ನೇತೃತ್ವದ ಶಿಕ್ಷಣ ಸಂಸ್ಥೆ ರಾಂಬಹು ಮಾಳಗಿ ಪ್ರಬೋಧಿನಿ (ಆರ್‌ಎಂಪಿ) ಈಗ ರಾಜಕೀಯ ನಾಯಕರನ್ನು ತಯಾರು ಮಾಡಲು ಹೊರಟಿದೆ!
ರಾಜಕಾರಣಿಯಾಗಲು ಬಯಸುವವರಿಗೆ ಆಗಸ್ಟ್ ಅನಂತರ ತರಬೇತಿ ಕೊಟ್ಟು ಸಜ್ಜುಗೊಳಿಸಲಿದೆ. ಆರೆಸ್ಸೆಸ್ ಎಂದ ಮಾತ್ರಕ್ಕೆ ಬಿಜೆಪಿ ನಾಯಕರಾಗಲು ಮಾತ್ರ ತರಬೇತಿ ಎಂದು ಅಂದುಕೊಂಡರೆ ತಪ್ಪು. ಯಾವುದೇ ಪಾರ್ಟಿಗೆ ಸೇರಿದ್ದರೂ ಉತ್ತಮ ರಾಜಕಾರಣಿ ಯಾಗಿ ರೂಪುಗೊಳ್ಳುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಲಿದೆ.
ರಾಜಕೀಯ, ಪತ್ರಿಕೋದ್ಯಮ, ಉತ್ತಮ ಆಡಳಿತ ಮತ್ತು ನಾಯಕತ್ವದ ಬಗ್ಗೆ 9 ತಿಂಗಳ ಕೋರ್ಸ್ ಥಾಣೆ ಜಿಲ್ಲೆಯಲ್ಲಿನ ಉಟಾನ್ ಶಿಬಿರದಲ್ಲಿ ಆರಂಭವಾಗಲಿದೆ. ಅಂದ ಹಾಗೆ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆಯೂ ಇದೆ. ಕಡೇ ಪಕ್ಷ ಪದವಿ ತೇರ್ಗಡೆಯಾಗಿರಬೇಕು. ಕೇವಲ ರಾಜಕಾರಣಿ ಮಾತ್ರವಲ್ಲ, ನಾಗರಿಕ ಸೇವಾ ಅಧಿಕಾರಿ, ಪತ್ರಕರ್ತರಾಗಲು ಬಯಸುವವರೂ ಇದಕ್ಕೆ ಸೇರಿಕೊಳ್ಳಬಹುದು ಎಂದು ಆರ್‌ಎಂಪಿ ಆಡಳಿತಾಧಿಕಾರಿ ಹೇಳಿಕೊಂಡಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 40 ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತದೆ. ಇದಕ್ಕೆ ಒಟ್ಟಾರೆ 2.5 ಲಕ್ಷ ರೂ. ಶುಲ್ಕ ತೆರಬೇಕು. ಇದರಲ್ಲಿ ಹಾಸ್ಟೆಲ್, ಊಟ, ವಸತಿ ಎಲ್ಲವೂ ಸೇರಿರುತ್ತದೆ.
ಅರ್ಜಿ ಹಾಕಲು ಜೂ.30 ಕಡೇ ದಿನ. ಆಗಸ್ಟ್ ಒಂದರಿಂದಲೇ ತರಗತಿ ಆರಂಭ. ತರಬೇತಿ ಮುಗಿಸಿದ ಅನಂತರ ಅಭ್ಯರ್ಥಿಗಳು ತಮಗೆ ಯಾವ ರಾಜಕಿಯ ಪಕ್ಷ ಬೇಕೋ ಅದನ್ನು ಸೇರಿಕೊಳ್ಳಲು ಪೂರ್ಣ ಸ್ವಾತಂತ್ರ್ಯವಿದೆ. ರಾಜಕೀಯ ಆಕಾಂಕ್ಷಿಗಳಿಗೆ ಸರಿಯಾದ ತರಬೇತಿ ನೀಡಬೇಕೆಂಬ ಹಿನ್ನೆಲೆಯಲ್ಲಿ ಇದನ್ನು ಆರಂಭಿಸುತ್ತಿರುವುದಾಗಿ ಬಿಜೆಪಿ ನಾಯಕ, ಆರ್‌ಎಂಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ. ಇಲ್ಲಿ ತರಬೇತಿ ಪಡೆದವರು ಈಗಾಗಲೇ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮತ್ತು ಎಮ್ಮೆನ್ನೆಸ್‌ನಲ್ಲಿ ಸಕ್ರಿಯರಾಗಿದ್ದಾರೆ.