ಪುಟ್ಟ ಬಾವಿ. ಬಾವಿಯಲ್ಲಿ ತೇಲುವ ತುಂಡು ಕಟ್ಟಿಗೆ. ಕಟ್ಟಿಗೆಯ ಮೇಲೆ ಒಂದು ಕಪ್ಪೆ. ಇನ್ನೊಂದೆಡೆ ಕಪ್ಪೆಯನ್ನೇ ದಿಟ್ಟಿಸುವ ಹಾವು. ಹಾವಿಗೆ ಭರ್ಜರಿ ಊಟದ ಕನಸು. ಕಪ್ಪೆಯನ್ನು ತಿನ್ನುವ ಆಸೆಯಲ್ಲಿ ಕಪ್ಪೆಯನ್ನು ಸಮೀಪಿಸುತ್ತದೆ. ತನ್ನತ್ತ ಬರುವ ಹಾವು ಕಂಡ ಕಪ್ಪೆ ದಾರಿ ಕಾಣದೆ “ಧೈರ್ಯಂ ಸರ್ವತ್ರ ಸಾಧನಂ’ ಎಂದು ಇಡೀ ಶಕ್ತಿಯನ್ನು ಬಳಸಿ ಮೇಲೆ ಹಾರಿತು. ಕಪ್ಪೆ ಹವಣಿಸಲು ನೀರಿನಿಂದ ಮೇಲೆ ಹಾರಿತು ಹಾವು. ಹಾವು ನೀರಿನಿಂದ ಮೇಲೆ ಬರುವುದನ್ನೇ ಕಾಯುತ್ತಿದ್ದ ಹದ್ದು ಕ್ಷಣಾರ್ಧದಲ್ಲಿ ಬಂದು ಹಾವನ್ನು ತನ್ನ ಕಾಲುಗಳಲ್ಲಿ ಹಿಡಿದು ಹಾರಿಹೋಯಿತು. ತಾಳ್ಮೆಯಿಂದ ಗುರಿ ಸ್ಪಷ್ಟವಿದ್ದ ಹದ್ದು ಆಹಾರ ಪಡೆಯಿತು. ಆಸೆಯ ಹಾವು ಆಹಾರವಾಯಿತು. ಧೈರ್ಯದ ಕಪ್ಪೆ ಬದುಕಿತು.
ನನ್ನ ಜೀವನ ಇಂದೇ ಕೊನೆ, ಹಾವಿಗೆ ಆಹಾರವಾಗಲಿಕ್ಕೆ ನಾನು ಹುಟ್ಟಿದ್ದು ಎಂದು ಕಪ್ಪೆ ಹೆದರಿ ಪ್ರಯತ್ನ ಮಾಡದೇ ಇರುತ್ತಿದ್ದರೆ ಅದು ಬದುಕಲು ಸಾಧ್ಯವಿತ್ತೇ. ತನ್ನ ಮುಂದಿರುವ ಕಪ್ಪೆಯಂತೆ ತನಗೂ ಶತ್ರುಗಳು ಇದ್ದಾರೆ ಎಂದು ಹಾವು ವಿಚಾರ ಮಾಡಿ ಅಕ್ಕಪಕ್ಕ ನೋಡಿದಿದ್ದರೆ ಅದು ಸಾಯುತ್ತಿತ್ತೇ. ಅವಸರ ಮಾಡಿ ತಲೆ ಮಾತ್ರ ಕಾಣುವ ಹಾವನ್ನು ಹಿಡಿಯಲು ಹದ್ದು ಬಂದರೆ ಅದರ ಹೊಟ್ಟೆ ತುಂಬುತ್ತಿತ್ತೇ.. ಇದರ ನೀತಿ ಧೈರ್ಯದಿಂದ ಮಾಡಿದ ಕಾರ್ಯ ಸಿದ್ಧಿಸುವುದು. ಕರ್ಮ ನಮ್ಮದು ಪ್ರತಿಫಲ ದೇವರದ್ದು ಎಂಬಂತೆ ಪ್ರಯತ್ನದಲ್ಲಿಯೇ ಗೆಲುವಿದೆ.
ಪ್ರಯತ್ನವೇ ಪಡದೆ ನನಗೆ ಗೆಲುವಿಲ್ಲ ಎನ್ನುವುದು ಮೂರ್ಖತನ. ಪ್ರಯತ್ನ ಪಟ್ಟು ಸೋತರೆ ಅದು ಪಾಠವಾಗುತ್ತದೆ. ಗೆದ್ದರೆ ಇನ್ನಷ್ಟು ಸಾಧನೆಗೆ ಸ್ಫೂರ್ತಿಯಾಗುತ್ತದೆ. ಆದರೆ ಪ್ರಯತ್ನವೇ ಪಡದೆ ಹಣೆಬರಹವನ್ನೋ, ದುರಾದೃಷ್ಟವನ್ನೋ ಹೊಣೆ ಮಾಡಿದರೆ ನಾವು ನಿಂತಲ್ಲೇ ನಿಂತಿರುತ್ತೇವೆ. ಧೈರ್ಯದಿಂದ ನನ್ನಿಂದ ಸಾಧ್ಯ ಅಂದುಕೊಂಡವನನ್ನು ಸೋಲಿಸುವುದು ಎಂದಿಗೂ ಸಾಧ್ಯವಿಲ್ಲ. ಬದುಕಲು ಬೇಕಿರುವುದು ಧೈರ್ಯ ಮತ್ತು ಪ್ರಯತ್ನ ಜತೆಗೆ ತಾಳ್ಮೆ.
ಇಂದಿನ ಕೊರೊನಾದ ಹಾವಳಿಯಲ್ಲಿ ಭಯವೇ ಕೊರೊನಾವಾದರೆ, ಧೈರ್ಯವೇ ವ್ಯಾಕ್ಸಿನ್ ಎಂಬ ಮಾತು ಸಹಜವೆನಿಸುತ್ತದೆ. ಇಂದು ಧೈರ್ಯವೇ ದಿವ್ಯ ಔಷಧ. ವಿಪತ್ತು ಬರುವುದು ಸಹಜ, ಅದನ್ನು ಧೈರ್ಯವಾಗಿ ಎದುರಿಸಬೇಕು. ಆಪತ್ತನ್ನು ಅವಕಾಶವಾಗಿ ಬಳಸುವ ಜಾಣ್ಮೆ ಹಾಗೂ ಧೈರ್ಯವಿದ್ದರೆ ಎಲ್ಲವನ್ನೂ ಜಯಿಸಬಹುದು, ಸಾಧಿಸಬಹುದು. ಜಿಂಕೆಯ ಓಡುವ ವೇಗ ಸಿಂಹದ ವೇಗಕ್ಕಿಂತ ಹೆಚ್ಚಿದ್ದರೂ ಭಯದಿಂದ ಜಿಂಕೆ ಸಿಂಹಕ್ಕೆ ಆಹಾರವಾಗುತ್ತದೆ. ಇದುವೇ ಅಂಜಿಕೆ. ಶೇಕ್ಸ್‌ಪಿಯರ್‌ಹೇಳುವಂತೆ ಹೇಡಿ ಸಾಯುವುದು ಹಲವು ಸಲ, ಧೈರ್ಯಶಾಲಿ ಸಾಯುವುದು ಒಂದೇ ಸಲ.
ಶಾಂತಾರಾಮ ಚಿಬ್ಬುಲಕರ
ಹಳಿಯಾಳ