ಬೆಂಗಳೂರು: ಮಗನ ಬರುವಿಕೆಗೆ ಕಾದಿದ್ದ ಪೋಷಕರು, ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಆತ ಸ್ವೀಕರಿಸದ ಹಿನ್ನೆಲೆಯಲ್ಲಿ ಆತ ವಾಸವಿದ್ದ ಪಿ.ಜಿ ಬಳಿ ತೆರಳಿದಾಗ ಮಗ ಮಲಗಿದ್ದ ಹಾಸಿಗೆಯಲ್ಲೇ ಪ್ರಾಣ ಬಿಟ್ಟಿದ್ದ ಘಟನೆ ಮತ್ತಿಕೆರೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಆಂಧ್ರಪ್ರದೇಶದಿಂದ ಮಗನನ್ನು ನೋಡಲು ಬಂದಿದ್ದ ರೈಲ್ವೆ ಅಧಿಕಾರಿ ಮೋಹನ್ ದಂಪತಿ, ದಿಢೀರ್ ಹೃದಯಾಘಾತದಿಂದ ಮೃತಪಟ್ಟಿದ್ದ ಮಗ ರಾಮಸ್ವಾಮಿಯ ಮೃತದೇಹವನ್ನು ಕೊಂಡೊಯ್ದ ಕರುಣಾಜನಕ ಘಟನೆ ಇದು.
ರಾಮಸ್ವಾಮಿ ಸಾಯಿ (21) ಹೃದಯಾಘಾತದಿಂದ ಮೃತಪಟ್ಟ ಯುವಕ. ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ರಾಮಸ್ವಾಮಿ, ಮತ್ತಿಕೆರೆಯ ಪಿ.ಜಿ ಒಂದರಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸವಿದ್ದ. ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಸಹಿ ಬೇಕಿತ್ತು. ಹೀಗಾಗಿ, ಬೆಂಗಳೂರಿಗೆ ಬರುವಂತೆ ಪೋಷಕರಿಗೆ ತಿಳಿಸಿದ್ದ.
ಹಲವು ತಿಂಗಳಿಂದ ಮಗನನ್ನು ನೋಡಿರದೆ ಹೆತ್ತವರು, ಅವನನ್ನು ನೋಡಿದಂತಾಗುತ್ತದೆ ಎಂದು ಭಾನುವಾರ ರಾತ್ರಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೊರಟಿದ್ದಾರೆ. ಸೋಮವಾರ ಮುಂಜಾನೆ 5.30ರ ಸುಮಾರಿಗೆ ತಂದೆಗೆ ಕರೆಮಾಡಿದ್ದ ರಾಮಸ್ವಾಮಿ, ಮತ್ತಿಕೆರೆ ಬಸ್ ನಿಲ್ದಾಣದ ಹತ್ತಿರ ಬನ್ನಿ, ನಾನು ಬಂದು ಕರೆದೊಯ್ಯುತ್ತೇನೆ ಎಂದು ತಿಳಿಸಿದ್ದ.
ಅದರಂತೆ ಮತ್ತಿಕೆರೆ ಬಸ್ ನಿಲ್ದಾಣದ ಹತ್ತಿರ ಹೋದ ಪೋಷಕರು ಮಗನಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಹೀಗಾಗಿ ಮಗ ವಾಸವಿದ್ದ ಮತ್ತಿಕರೆಯ ಪಿ.ಜಿಗೆ ಹೋಗಿದ್ದಾರೆ. ಆತನಿದ್ದ ಕೊಠಡಿ ಒಳಗೆ ಪ್ರವೇಶಿಸಿದ ಪೋಷಕರಿಗೆ ಗರಬಡಿದಂತಾಗಿದೆ. ಮಗ ರಾಮಸ್ವಾಮಿ ಹಾಸಿಗೆಯಲ್ಲಿ ಮಲಗಿದ್ದವನು ಅಲುಗಾಡುತ್ತಿರಲಿಲ್ಲ.
ಗಾಬರಿಕೊಂಡ ಮೋಹನ್ ದಂಪತಿ, ಕೂಗಿಕೊಂಡಿದ್ದಾರೆ. ಪಿ.ಜಿಯಲ್ಲಿದ್ದವರ ಸಹಕಾರದಿಂದ ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದಾಗ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಹೃದಯಾಘಾತ
ವಿದ್ಯಾರ್ಥಿ ರಾಮಸ್ವಾಮಿ ಸಾಯಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಅವರ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಪೋಷಕರು ಕೂಡ ಸಾವಿನ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಅವರು ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಯಶವಂತಪುರ ಠಾಣೆ
ಪೊಲೀಸರು ತಿಳಿಸಿದರು.