Advertisement

ಹೊಸಗುಂದ ದೇಗುಲಕ್ಕೆ ‘ಹೊಸ ವೈಭವ’ತಂದ ಪುತ್ತೂರಿನ ದಂಪತಿ!

01:21 AM May 10, 2019 | Team Udayavani |

ಪುತ್ತೂರು: ಹದಿನೆಂಟು ವರ್ಷಗಳ ಹಿಂದೆ ಮಲೆನಾಡಿನ ಸಾಗರ ತಾಲೂಕಿನ ಹೊಸಗುಂದದಲ್ಲಿ ನೆಲೆಸಿದ ಪುತ್ತೂರಿನ ದಂಪತಿ ಕಾಲಗರ್ಭದಲ್ಲಿ ಸೇರಿಹೋಗಿದ್ದ ಅಲ್ಲಿನ ಐತಿಹಾಸಿಕ ದೇಗುಲವೊಂದನ್ನು ಈಗ ಬೆಳಕಿಗೆ ತಂದು ಸಾಧನೆ ಮಾಡಿದ್ದಾರೆ.

Advertisement

ಅಲ್ಲೊಂದು ಭವ್ಯ ದೇವಾಲಯವಿತ್ತು ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಆದರೆ ಪುತ್ತೂರಿನ ಉದ್ಯಮಿ ಸಿ.ಎಂ.ಎನ್‌. ಶಾಸ್ತ್ರಿ ದಂಪತಿ ನಿವೃತ್ತ ಜೀವನ ಕಳೆಯಲು ಹೊಸಗುಂದಕ್ಕೆ ವಾಸ್ತವ್ಯ ಬದಲಾಯಿಸಿದ ಬಳಿಕ ಚಿತ್ರಣ ಬದಲಾಯಿತು. ಅಲ್ಲಿ ಜಾಗ ಖರೀದಿಸಿದ ಸಂದರ್ಭದಲ್ಲಿ 600 ಎಕ್ರೆಯಷ್ಟು ವಿಶಾಲವಾದ ಕಾಡಿನಲ್ಲಿ ದೇವಸ್ಥಾನದ ಅವಶೇಷಗಳು ಮುಚ್ಚಿ ಹೋಗಿದ್ದವು. ಇದು 1991ರ ಸ್ಥಿತಿ.

ಹುಡುಕಾಡಿದಾಗ ಸಿಕ್ಕಿತು
ಶಾಸ್ತ್ರಿಯವರು ಅಲ್ಲಿ ಕೃಷಿ ಆರಂಭಿಸಿದಾಗ ಕಾಣಿಸಿಕೊಂಡಿದ್ದ ತೊಂದರೆಗಳ ಪರಿಹಾರಕ್ಕೆ ವೇದ ವಿದ್ವಾಂಸ ಕಟ್ಟೆ ಪರಮೇಶ್ವರ ಭಟ್ ಅವರನ್ನು ಸಂಪರ್ಕಿಸಿದಾಗ ಅವರು ಹಳೆಯ ದೇವಸ್ಥಾನ ಇರುವ ವಿಚಾರ ತಿಳಿಸಿದ್ದರು. ಅದರಂತೆ ಶಾಸ್ತ್ರಿ ಅವರು ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಜೀರ್ಣಾ ವಸ್ಥೆಯ ಶಿವಾಲಯ ಕಣ್ಣಿಗೆ ಬಿತ್ತು. ವಿದ್ವಾಂಸರ ಸೂಚನೆಯಂತೆ ನರ್ಮದಾ ಬಾಣಲಿಂಗವನ್ನೇ ತರಲಾಯಿತು.

ಅದೇ ಕಾಲಕ್ಕೆ ಊರವರೂ ಶಾಸ್ತ್ರಿ ಅವರ ಬಳಿ ಬಂದು ಹಿಂದಿನ ಐತಿಹ್ಯವೊಂದನ್ನು ಹಂಚಿಕೊಂಡರು. ವರದಪುರದ ಶ್ರೀಧರ ಸ್ವಾಮೀಜಿ ಅವರೊಮ್ಮೆ ಹೊಸಗುಂದ ಪ್ರದೇಶಕ್ಕೆ ಬಂದಿದ್ದಾಗ ದೇಗುಲದ ಜೀರ್ಣೋದ್ಧಾರ ಪ್ರಸ್ತಾವಕ್ಕೆ ಒಪ್ಪದೆ, ಹೊರಗಿನಿಂದ ವ್ಯಕ್ತಿಯೊಬ್ಬರು ಬರಲಿದ್ದು, ಅವರೇ ಪುನರುಜ್ಜೀವನ ನೆರವೇರಿಸುವರು, ಆಗ ಸಹಾಯ ನೀಡಿ ಎಂದು ಊರವರಲ್ಲಿ ಹೇಳಿದ್ದರಂತೆ. ಈಗ ಶಾಸ್ತ್ರಿಯವರು ಪುನರುಜ್ಜೀವನಕ್ಕೆ ಕೈಹಾಕಿದ್ದಾರೆ ಎಂಬ ಮಾಹಿತಿ ಊರವರಿಗೆ ತಿಳಿದು ಅವರೂ ಸೇರಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ ಆರಂಭವಾಯಿತು. 2001ರ ಮೇ 4ರಂದು ಪೂಜಾ ಕಾರ್ಯಗಳೂ ಆರಂಭವಾದವು.

ಸುಮಾರು 7 ಕೋಟಿ ರೂ. ವೆಚ್ಚದ ಹೊಸಗುಂದ ದೇವಸ್ಥಾನ ಪುನರುಜ್ಜೀವನದ ಯೋಜನೆ ಪೂರ್ಣ ಗೊಂಡಿದ್ದು, ಮೇ 1 ಮತ್ತು 2ರಂದು ಪುನರ್‌ ಪ್ರತಿಷ್ಠೆ, ಕುಂಭಾಭಿಷೇಕ ಶಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿದೆ.

Advertisement

ಪ್ರವಾಸಿ ತಾಣ
ಹೊಸಗುಂದದ 600 ಎಕರೆ ಅರಣ್ಯ ಇಂದು ದೇವರ ಕಾಡಾಗಿ ಬದಲಾಗಿದೆ. ಜಲತಜ್ಞರಾದ ಶ್ರೀಪಡ್ರೆ, ಶಿವಾನಂದ ಕಳವೆ ಅವರ ಸಲಹೆ ಮೇರೆಗೆ ಕಾಡಿನೊಳಗೆ 5 ವರ್ಷಗಳ ಕಾಲ ಜಲಕೊಯ್ಲು ನಡೆದಿದೆ. ಕಾಡೊಳಗೆ ಇದ್ದ 5 ಕೆರೆಗಳು ನೀರಿನಿಂದ ನಳನಳಿಸುತ್ತಿವೆ. ದೇವಸ್ಥಾನದ ಪುಷ್ಕರಿಣಿಯಲ್ಲಿ ಬಿರು ಬೇಸಿಗೆಯಲ್ಲೂ 15ರಿಂದ 20 ಅಡಿಯಷ್ಟು ನೀರಿದೆ.

ಕುವೆಂಪು ವಿವಿಯ ತಜ್ಞರು ಅಧ್ಯಯನ ನಡೆಸಿದ್ದು, 340 ಜಾತಿಯ ಸಸ್ಯ ಪ್ರಭೇದಗಳನ್ನು ಗುರುತಿಸಿದ್ದಾರೆ. ದೇವಸ್ಥಾನ ಸಮಿತಿಯ ವತಿಯಿಂದ 200ಕ್ಕೂ ಅಧಿಕ ಪ್ರಭೇದದ ಸಸ್ಯಗಳನ್ನು ನೆಡಲಾಗಿದೆ. ಹೊಸಗುಂದವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ದೇವಸ್ಥಾನಕ್ಕೆ ಮೂರ್ತ ರೂಪ ಕೊಡಲು ಮುಂದಾದಾಗ ನೆರವಿಗೆ ಬಂದವರು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರು. ಪುರಾತನ ದೇವಸ್ಥಾನವನ್ನು ಪುನರ್‌ ನಿರ್ಮಿಸುವ ಹೊಣೆ ಹೊತ್ತವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು. ಸುಮಾರು 1.5 ಕೋಟಿ ರೂ. ತಗಲಬಹುದಾಗಿದ್ದ ಪುರಾತನ ದೇವಸ್ಥಾನದ ವಿನ್ಯಾಸವನ್ನು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಮೂಲಕ ಕೇವಲ 36 ಲಕ್ಷ ರೂ.ಗಳಲ್ಲಿ ನಿರ್ಮಿಸಿಕೊಟ್ಟರು, ಧರ್ಮಸ್ಥಳದಿಂದ 1 ಲಕ್ಷ ರೂ.ಗಳ ಅನುದಾನವೂ ದೊರೆಯಿತು.

ಡಾ| ಹೆಗ್ಗಡೆಯವರ ಸಹಾಯ
ದೇವಸ್ಥಾನಕ್ಕೆ ಮೂರ್ತ ರೂಪ ಕೊಡಲು ಮುಂದಾದಾಗ ನೆರವಿಗೆ ಬಂದವರು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರು. ಪುರಾತನ ದೇವಸ್ಥಾನವನ್ನು ಪುನರ್‌ ನಿರ್ಮಿಸುವ ಹೊಣೆ ಹೊತ್ತವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು. ಸುಮಾರು 1.5 ಕೋಟಿ ರೂ. ತಗಲಬಹುದಾಗಿದ್ದ ಪುರಾತನ ದೇವಸ್ಥಾನದ ವಿನ್ಯಾಸವನ್ನು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಮೂಲಕ ಕೇವಲ 36 ಲಕ್ಷ ರೂ.ಗಳಲ್ಲಿ ನಿರ್ಮಿಸಿಕೊಟ್ಟರು, ಧರ್ಮಸ್ಥಳದಿಂದ 1 ಲಕ್ಷ ರೂ.ಗಳ ಅನುದಾನವೂ ದೊರೆಯಿತು.
Advertisement

Udayavani is now on Telegram. Click here to join our channel and stay updated with the latest news.

Next