ಕಡಬ: ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನೆಲ್ಯಾಡಿಯ ಅಶ್ವಿನ್ ಅವರ ಚಿಕಿತ್ಸೆಗೆ ನೆರವಾಗುವ ಸಲುವಾಗಿ ಕಡಬದ ಕೊಲ್ಲೆಸಾಗು ನಿವಾಸಿ, ಆಟೋ ಚಾಲಕ ಸುರೇಶ್ ಅವರು ತನ್ನ ಮಕ್ಕಳ ಹುಟ್ಟುಹಬ್ಬ ಆಚರಿಸಲೆಂದು ಕೂಡಿಟ್ಟಿದ್ದ 10 ಸಾವಿರ ರೂ.ಗಳನ್ನು ಅಶ್ವಿನ್ ಅವರ ತಂದೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆಟೋ ಚಾಲಕ ಸುರೇಶ್ ಕೊಲ್ಲೆಸಾಗು ಹಾಗೂ ಮೀನಾಕ್ಷಿ ದಂಪತಿ ತಮ್ಮ ಮಕ್ಕಳಾದ ನಿಖೀತಾ (4) ಹಾಗೂ ನಿಖೀಲ್ (1) ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದರು. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಂಡ ಸುದ್ದಿಯೊಂದು ಅವರ ಮನ ಕರಗಿಸಿತ್ತು.
ಕೂಲಿ ಕೆಲಸಕ್ಕೆ ಹೋಗುತ್ತಿದ್ದ ನೆಲ್ಯಾಡಿಯ ಅಶ್ವಿನ್ ಅಪಘಾತಕ್ಕೀಡಾಗಿ ಕಿಡ್ನಿಗೂ ಹಾನಿಯಾಗಿ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಹಾಗೂ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ಅವರ ಅಂಗವಿಕಲ ತಂದೆ ಮತ್ತು ಮಾನಸಿಕ ಖನ್ನತೆಯಿಂದ ಬಳಲುತ್ತಿರುವ ತಾಯಿ ಪಡುತ್ತಿರುವ ಕಷ್ಟವನ್ನು ಕಂಡು ಇಚ್ಲಂಪಾಡಿಯ ಸಾಮಾಜಿಕ ಸಂಘಟನೆಯಾದ ನೀತಿ ತಂಡದ ಅಧ್ಯಕ್ಷ ಜಯನ್ ಟಿ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸಾರ್ವಜನಿಕರ ನೆರವು ಯಾಚಿಸಿದ್ದರು. ಅದನ್ನು ಗಮನಿಸಿದ ಸುರೇಶ್ ಪತ್ನಿಯ ಜತೆ ಚರ್ಚಿಸಿ, ಮಕ್ಕಳ ಹಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಅದಕ್ಕಾಗಿ ಕೂಡಿಟ್ಟಿದ್ದ ಹಣಕ್ಕೆ ಇನ್ನಷ್ಟು ಸೇರಿಸಿ, 10 ಸಾವಿರ ರೂ.ಗಳನ್ನು ಅಶ್ವಿನ್ ಚಿಕಿತ್ಸೆಗೆ ನೀಡಲು ತೀರ್ಮಾನಿಸಿದ್ದರು. ನೀತಿ ತಂಡದ ಪದಾಧಿಕಾರಿಗಳೊಂದಿಗೆ ಕುಟುಂಬ ಸಮೇತರಾಗಿ ನೆಲ್ಯಾಡಿಗೆ ಮನೆಗೆ ತೆರಳಿದ ಸುರೇಶ್, ಅಶ್ವಿನ್ ತಂದೆಗೆ ನಗದನ್ನು ಹಸ್ತಾಂತರಿಸಿ ಮಾದರಿಯಾದರು.
ಮನ ಕರಗಿತು
ವಾಟ್ಸ್ ಆ್ಯಪ್‌ನಲ್ಲಿ ಬಂದ ಸುದ್ದಿ ಓದಿ ನಮ್ಮ ಮನಸ್ಸು ಕರಗಿತು. ನಾವು ಕೂಡ ದಿನದ ಸಂಪಾದನೆಯಲ್ಲಿ ಮನೆ ನಿಭಾಯಿಸುವವರು. ನಮ್ಮ ಒಂದು ದಿನದ ಖುಷಿಗಾಗಿ ಹುಟ್ಟುಹಬ್ಬ ಆಚರಿಸಿ ದುಡ್ಡು ಖರ್ಚು ಮಾಡುವ ಬದಲು ಅಶ್ವಿನ್ ಅವರ ಚಿಕಿತ್ಸೆಗೆ ನೆರವಾಗುವುದು ಮಾನವೀಯತೆ ಎನ್ನುವ ತೀರ್ಮಾನಿಸಿ ಮಕ್ಕಳ ಹುಟ್ಟುಹಬ್ಬ ಆಚರಣೆಗೆ ಕೂಡಿಟ್ಟಿದ್ದ ದುಡ್ಡನ್ನು ಅಶ್ವಿನ್ ಮನೆಗೆ ತೆರಳಿ ಮಕ್ಕಳ ಮೂಲಕವೇ ಅವರ ತಂದೆಗೆ ಹಸ್ತಾಂತರಿಸಿದೆವು.
– ಸುರೇಶ್ ಕೊಲ್ಲೆಸಾಗು ಆಟೋ ಚಾಲಕ, ಕಡಬ