Advertisement

ವಿವಾಹೇತರ ಲೈಂಗಿಕ ಸಂಬಂಧ: ಪತಿ, ಪತ್ನಿ ವಿಷ ಸೇವಿಸಿ ಆತ್ಮಹತ್ಯೆ

03:47 PM Jul 27, 2017 | udayavani editorial |

ಧೋಲ್‌ಪುರ, ರಾಜಸ್ಥಾನ : ವಿವಾಹೇತರ ಲೈಂಗಿಕ ಸಂಬಂಧದ ವಿಷಯದಲ್ಲಿನ ಮಾತಿನ ಜಗಳದ ಪರಾಕಾಷ್ಠೆಯಲ್ಲಿ  ವಿಷ ಸೇವಿಸಿದ ಪತಿ ಆನಂದ್‌ (40), ಪತ್ನಿ ಪ್ರೀತಿ (38) ಮೃತಪಟ್ಟ ಘಟನೆ ನಡೆದಿದೆ. 

Advertisement

ಈ ಘಟನೆಯಲ್ಲಿ ಇವರೊಂದಿಗೆ ವಿಷ ಸೇವಿಸಿದ ಮೂರನೇ ವ್ಯಕ್ತಿಯಾಗಿರುವ ಆನಂದ್‌ ಅವರ ಸೋದರ ಸಂಬಂಧಿ ರೂಪೇಶ್‌ (29) ಆಸ್ಪತ್ರೆಯಲ್ಲೀಗ ಸಾವು ಬದುಕಿನ ಹೋರಾಟದಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ. 

ಈ ಮೂವರು ನಿನ್ನೆ ಬುಧವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ  ಮನೆಯ ಕೋಣೆಯೊಂದರಲ್ಲಿ ಬಿದ್ದುಕೊಂಡಿದ್ದುದನ್ನು ರೂಪೇಶನ ತಂದೆ ಗಮನಿಸಿ ಒಡನೆಯೇ ಅವರೆಲ್ಲರನ್ನೂ ಸಮೀಪದ ಆಗ್ರಾದಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಪತಿ ಆನಂದ್‌ ಮತ್ತು ಪತ್ನಿ ಪ್ರೀತಿ ಕೊನೆಯುಸಿರೆಳೆದರು. 

ಪೊಲೀಸರು ನಡೆಸಿರುವ ಪ್ರಾಥಮಿಕ ಪರೀಕ್ಷೆ ಪ್ರಕಾರ ಪ್ರೀತಿಗೆ ಕಳೆದ ಐದು ವರ್ಷಗಳಿಂದ ರೂಪೇಶ್‌ ಜತೆಗೆ ವಿವಾಹೇತರ ಲೈಂಗಿಕ ಸಂಬಂಧ ಇತ್ತು. ರೂಪೇಶ್‌ ಈ ತಿಂಗಳ ಆದಿಯಲ್ಲಿ ಮದುವೆಯಾಗಿದ್ದ. ಆದರೂ ಪ್ರೀತಿ ಜತೆಗಿನ ಆತನ ಲೈಂಗಿಕ ಸಂಬಂಧ ಮುಂದುವರಿದೇ ಇತ್ತು. ರೂಪೇಶ್‌ ನ ಮಡದಿ ಪೂಜಾಗೆ ತನ್ನ ಪತಿಯ ಈ ವಿವಾಹೇತರ ಲೈಂಗಿಕ ಸಂಬಂಧ ತಿಳಿದು ಆಕೆ ತವರಿಗೆ ಹೋಗಿದ್ದಳು. 

ಈ ನಡುವೆ ಈ ಅನೈತಿಕ ಸಂಬಂಧದ ಬಗ್ಗೆ  ಆನಂದ್‌, ಪ್ರೀತಿ ಮತ್ತು ರೂಪೇಶ್‌ ನಡುವೆ ಮಾತಿನ ಜಗಳ ತಾರಕಕ್ಕೇರಿತ್ತು. ಪರಿಣಾಮವಾಗಿ ಅವರೆಲ್ಲರೂ ವಿಷ ಸೇವಿಸಿದರು ಎಂದು ಎಸ್‌ಪಿ ರಾಜೇಶ್‌ ಸಿಂಗ್‌ ತಿಳಿಸಿದ್ದಾರೆ. 

Advertisement

ಮೃತ ಪತಿ ಆನಂದ್‌ ಮತ್ತು ಪತ್ನಿ ಪ್ರೀತಿ ಅವರ ಶವಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿ ಶವಗಳನ್ನು ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ತನಿಖೆ ಮುಂದುವರಿದಿದೆ.   

Advertisement

Udayavani is now on Telegram. Click here to join our channel and stay updated with the latest news.

Next