ಬೆಂಗಳೂರು: ಮನೆ ಮಾಲಿಕರು ಮತ್ತು ಭೋಗ್ಯದಾರರಿಗೆ ವಂಚನೆ ಮಾಡುತ್ತಿದ್ದ ಜಿಯಾ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ದಂಪತಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.
ನಗರದ ಅಹ್ಮದ್ ಅಲಿ ಬೇಗ್ (40) ಮತ್ತು ಆತನ ಪತ್ನಿ ಮುಯಿನಾ ಸಾಮದಾನಿ(38) ಬಂಧಿತರು.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಕ್ರಮ್ ಪಾಷಾ, ನೂರ್ ಅಹ್ಮದ್ ಅಲಿ ಬೇಗ್, ಅಬ್ದುಲ್ ರಹೀಂ, ಸೈಯದ್ ಹಾಗೂ ಜಿಯಾ ಹೋಮ್ಸ್ ಪ್ರೈವೇಟ್ ಲಿ. ಸಿಬ್ಬಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಇತ್ತೀಚೆಗೆ ಕಮ್ಮನಹಳ್ಳಿ ನಿವಾಸಿ ಅಮ್ಲೋರ್ ಪವ ಮೇರಿ ರಕ್ವೀ ಎಂಬುವರಿಗೆ ಕಮ್ಮನಹಳ್ಳಿಯ 13ನೇ ಕ್ರಾಸ್ ಯೋಗೇಶಪ್ಪ ರಸ್ತೆಯಲ್ಲಿರುವ 2ನೇ ಮಹಡಿಯ 501ನೇ ಮನೆಯನ್ನು 14 ಲಕ್ಷ ರೂ.ಗೆ ಭೋಗ್ಯಕ್ಕೆ ಹಾಕಿದ್ದರು. ಅದೇ ವೇಳೆ ಇತರರಿಗೂ ಮನೆ ಭೋಗ್ಯಕ್ಕೆ ಹಾಕಿ ವಂಚಿಸಿದ್ದಾರೆ. ಈ ಸಂಬಂಧ ಅಮ್ಲೋರ್ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಜಿಯಾ ಸಂಸ್ಥೆ ಹೆಸರಿನಲ್ಲಿ ಮನೆ ಅಥವಾ ಫ್ಲ್ಯಾಟ್ ಗಳನ್ನು ಬಾಡಿಗೆ ಪಡೆದುಕೊಂಡು ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ಆ ಮನೆಗಳನ್ನು ಬೇರೊಬ್ಬರಿಗೆ ಲಕ್ಷಾಂತರ ರೂ.ಗೆ ಭೋಗ್ಯಕ್ಕೆ ನೀಡುತ್ತಿದ್ದರು. ಇನ್ನು ಮನೆ ಮಾಲಿಕರು ಕೂಡ ಮನೆ ಬಾಡಿಗೆ ಕೊಟ್ಟಿದ್ದೇವೆ ಅಂತ ಸುಮ್ಮನೆ ಇರುತ್ತಿದ್ದರು. ಆದರೆ, ಒಂದೆರಡು ತಿಂಗಳು ಬಾಡಿಗೆ ಕೊಟ್ಟು ನಂತರ ಬಾಡಿಗೆ ಕೊಡುತ್ತಿರಲಿಲ್ಲ. ಮಾಲಿಕರು ಮನೆ ಬಳಿ ಹೋಗಿ ನೋಡಿದಾಗ ಮನೆಯಲ್ಲಿ ಬೇರೆ ಯಾರೋ ವ್ಯಕ್ತಿಗಳು ನಾವು ಈ ಮನೆಯನ್ನು ಭೋಗ್ಯಕ್ಕೆ ಪಡೆದುಕೊಂಡಿದ್ದಾಗಿ ಹೇಳುತ್ತಿದ್ದರು. ಹೀಗೆ ಸ್ವಂತ ಮನೆ ಮಾಲಿಕರು ಮತ್ತು ಭೋಗ್ಯಕ್ಕೆ ಇರುವವರನ್ನು ಏಕಕಾಲಕ್ಕೆ ಈ ಸಂಸ್ಥೆ ವಂಚಿಸಿತ್ತು. 15-20 ಸಾವಿರ ರೂ. ಬಾಡಿಗೆಗೆ ಅಂತ ಮನೆ ಪಡೆದು 15-20 ಲಕ್ಷ ರೂ.ಗೆ ಮನೆಯನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕುತ್ತಿದ್ದ ಆರೋಪಿಗಳು, ಹೆಣ್ಣೂರು, ಬಾಣಸವಾಡಿ ಸೇರಿ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ಮನೆ ಮಾಲಿಕರು ಹಾಗೂ ಭೋಗ್ಯದಾರರಿಗೆ ಕೋಟ್ಯಂತರ ರೂ. ವಂಚಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿತ್ತು. ಈ ಪ್ರಕರಣಗಳು ಸಿಸಿಬಿಗೆ ವರ್ಗಾವಣೆ ಆಗಿದ್ದು, ಇದೀಗ ಹೈದಾರಾಬಾದ್‌ನಲ್ಲಿದ್ದ ದಂಪತಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.