Advertisement

ರೈತರ ದೇಶವ್ಯಾಪಿ ಮುಷ್ಕರ : 10ಕ್ಕೆ ಭಾರತ ಬಂದ್‌ 

10:26 AM Jun 02, 2018 | Harsha Rao |

ಹೊಸದಿಲ್ಲಿ: ಸಂಪೂರ್ಣ ಸಾಲಮನ್ನಾ, ಬೆಳೆಗಳಿಗೆ ನ್ಯಾಯಯುತ ದರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅನ್ನದಾತರು 10 ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಶುಕ್ರವಾರ ಆರಂಭಿಸಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್‌, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ರೈತರು ತಾವು ಬೆಳೆದ ತರಕಾರಿ, ಹಣ್ಣು, ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಿದ್ದಾರೆ.

Advertisement

ಕೆಲವು ರಾಜ್ಯಗಳಲ್ಲಿ ರೈತರು ಹಾಲು, ತರಕಾರಿಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡಿಗಳು ಹಾಗೂ ಸಗಟು ಮಾರುಕಟ್ಟೆಗಳನ್ನು ಬಹಿಷ್ಕರಿಸುವಂತೆ ರೈತ ಸಂಘಟನೆಗಳು ಕರೆ ನೀಡಿದ್ದು, ಆಹಾರ ವಸ್ತುಗಳ ಕೊರತೆ ಹಾಗೂ ಬೆಲೆ ಏರಿಕೆ ಭೀತಿ ಮೂಡಿಸಿದೆ. ಒಟ್ಟು 22 ರಾಜ್ಯಗಳಲ್ಲಿ “ಗಾಂವ್‌ ಬಂದ್‌’ ಮುಷ್ಕರ ಜಾರಿಯಲ್ಲಿದೆ ಎಂದು ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಮಹಾಸಭಾ ಸಂಚಾಲಕ ಶಿವಕುಮಾರ್‌ ಶರ್ಮಾ ತಿಳಿಸಿದ್ದಾರೆ.

ಯಾರ ನೇತೃತ್ವ?: ಕಿಸಾನ್‌ ಏಕ್ತಾ ಮಂಚ್‌ ಮತ್ತು ರಾಷ್ಟ್ರೀಯ ಕಿಸಾನ್‌ ಮಹಾ ಸಂಘದ ಬ್ಯಾನರ್‌ನಡಿ ಈ ಪ್ರತಿಭಟನೆ ನಡೆಯುತ್ತಿದೆ. ಇವುಗಳಡಿ 172 ರೈತ ಸಂಘಟನೆಗಳಿದ್ದು, ಕಳೆದ ತಿಂಗಳು ನಡೆದ ಸಭೆಯಲ್ಲಿ ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿತ್ತು. ಇದೇ ವೇಳೆ, ಕಡಿಮೆ ಆದಾಯ, ರೈತರ ಆತ್ಮಹತ್ಯೆ, ಸಾಲ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರಕಾರ ವಿಫ‌ಲವಾಗಿದೆ ಎಂದು ಆರೋಪಿಸಿರುವ ಭಾರತೀಯ ಕಿಸಾನ್‌ ಒಕ್ಕೂಟದ ಅಧ್ಯಕ್ಷ ಬಲ್ಬಿàರ್‌ ಸಿಂಗ್‌ ರಾಜೇವಾಲ್‌, ನಮ್ಮ ಈ ಪ್ರತಿಭಟನೆಗೆ ರೈತರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರೂ, ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ರೈತರೇ ಸ್ವಯಂಪ್ರೇರಿತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಬೇಡಿಕೆಗಳೇನು?
ರೈತರಿಗಾಗಿ ಕನಿಷ್ಠ ಉದ್ಯೋಗ ಖಾತ್ರಿ ಯೋಜನೆ ಜಾರಿ, ಸ್ವಾಮಿನಾಥನ್‌ ಆಯೋಗದ ವರದಿ ಅನುಷ್ಠಾನ, ಸಂಪೂರ್ಣ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನಿಗದಿ.

ಯಾವ ರೀತಿ ಪ್ರತಿಭಟನೆ?
– ಹಾಲು ಸೇರಿದಂತೆ ಯಾವುದೇ ಉತ್ಪನ್ನಗ ಳನ್ನು ಮಾರಾಟ ಮಾಡಲು ರೈತರು ನಗರ ಪ್ರದೇಶಗಳ ಮಾರುಕಟ್ಟೆಗೆ ಬರುವುದಿಲ್ಲ
– 10 ದಿನಗಳ ಕಾಲ ರೈತರಿಂದ ತಮ್ಮ ಬೆಳೆಗಳು, ಉತ್ಪನ್ನಗಳ ಮಾರಾಟ ಸ್ಥಗಿತ
– ಗ್ರಾಮದಲ್ಲೇ ಇರುವ ರೈತರು ಅಗತ್ಯವಿದ್ದರೆ ತಮ್ಮ ಗ್ರಾಮಸ್ಥರಿಗಷ್ಟೇ ಮಾರಾಟ ಮಾಡಬಹುದು
– ಕೆಲವೆಡೆ ತಮ್ಮ ಬೆಳೆಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ
– ಪ್ರತಿಭಟನೆಯ ಕೊನೆಯ ದಿನವಾದ ಜೂ.10ರಂದು ಭಾರತ್‌ ಬಂದ್‌ಗೆ ಕರೆ

Advertisement

ರಾಜಕೀಯ ಪ್ರೇರಿತ: ಬಿಕೆಎಸ್‌
ಈ ನಡುವೆ, ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಆರೆಸ್ಸೆಸ್‌ನ ಅಂಗ ಸಂಸ್ಥೆಯಾದ ಭಾರತೀಯ ಕಿಸಾನ್‌ ಸಂಘ ಹೇಳಿದೆ. ಈ ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದೆ. ಇದೊಂದು ರಾಜಕೀಯ ಪ್ರತಿಭಟನೆಯೇ ಹೊರತು ರೈತರ ಹೋರಾಟವಲ್ಲ. 2019ರ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಇದನ್ನು ನಡೆಸಲಾ ಗುತ್ತಿದೆ. ಇದರ ಭಾಗವಾಗಲು ನಾವು ಇಷ್ಟಪಡುವುದಿಲ್ಲ ಎಂದು ಬಿಕೆಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಮೋಹಿನಿ ಮೋಹನ್‌ ತಿಳಿಸಿದ್ದಾರೆ. ಜತೆಗೆ, “ಪ್ರತಿಭಟನೆಯಲ್ಲಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದು ನೋಡಿ ನನಗೆ ಅಚ್ಚರಿಯಾಗುತ್ತಿದೆ. ದಿಲ್ಲಿ ಸರಕಾರದಲ್ಲಿ ಕೃಷಿ ಇಲಾಖೆಯೇ ಇಲ್ಲ. ಅಂಥದ್ದರಲ್ಲಿ ಅವರು ಹೇಗೆ ಇದರಲ್ಲಿ ಭಾಗವಹಿ ಸುತ್ತಿದ್ದಾರೆ,’ ಎಂದೂ ಮೋಹಿನಿ ಮೋಹನ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next