Advertisement

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

08:18 PM Apr 23, 2024 | Team Udayavani |

ಚಿತ್ರದುರ್ಗ : ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿದೆ. 70 ಕೋಟಿ ನಿರುದ್ಯೋಗಿಗಳು ದೇಶದಲ್ಲಿದ್ದರೆ, ಕೇಂದ್ರ ಸರ್ಕಾರದಲ್ಲೇ 30 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ “ಕಾಂಗ್ರೆಸ್‌ ನ್ಯಾಯ ಸಂಕಲ್ಪ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವ ನಾಯಕ ಎನ್ನಲಾಗುತ್ತಿದೆ. ಚಿಟಿಕೆ ಹೊಡೆದರೆ ಯುದ್ಧ ನಿಲ್ಲುತ್ತದೆ ಎಂದು ಬಿಂಬಿಸಲಾಗಿದೆ. ಇಷ್ಟು ದೊಡ್ಡ ನಾಯಕರಿದ್ದೂ ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳು ಯಾಕೆ ಉಳಿದಿವೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಜನಜೀವನ ಸಂಘರ್ಷಕ್ಕೆ ಸಿಲುಕುತ್ತಲೇ ಇದೆ. ಶ್ರಮಜೀವಿಗಳು ಎಷ್ಟೇ ಕಷ್ಟಪಟ್ಟರೂ ಅವರ ಬದುಕಿನ ಸುಧಾರಣೆ ಆಗುತ್ತಿಲ್ಲ. ಆದರೆ, ಮೋದಿ ಅವರ ಇಬ್ಬರು ಗೆಳೆಯರು ಮಾತ್ರ ದಿನೇ ದಿನೇ ಬೆಳೆಯುತ್ತಿದ್ದಾರೆ. ಕೋವಿಡ್‌ ಪರಿಸ್ಥಿತಿಯಲ್ಲೂ ಅವರ ಆದಾಯ ಏರಿಕೆಯಾಗಿದೆ. ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಆದರೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದರು.

ದೇಶದಲ್ಲಿ ಎರಡು ರೀತಿಯ ಸತ್ಯಗಳಿವೆ. ಒಂದು ನಿತ್ಯದ ಜಂಜಾಟದ ಬದುಕು, ಬೆಲೆ ಏರಿಕೆ. ಇನ್ನೊಂದು ಮಾಧ್ಯಮಗಳಲ್ಲಿ ತೋರಿಸುವ ದೇಶದ ವೈಭವ. ಆದರೆ, ವಾಸ್ತವದ ಬದುಕು ದುಸ್ತರವಾಗಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ದಿನಸಿ, ಬಂಗಾರ, ಬೆಳ್ಳಿ ಬೆಲೆಗಳ ಏರಿಕೆಯಿಂದ ಜನ ತತ್ತರಿಸಿದ್ದಾರೆ ಎಂದರು.

ಎಲೆಕ್ಟ್ರೋಲ್‌ ಬಾಂಡ್‌ ಹೆಸರಿನಲ್ಲಿ ಸಾವಿರಾರು ಕೋಟಿ ಚಂದಾ ಎತ್ತಲಾಗಿದೆ. ಇದರಲ್ಲಿ ಆಗುತ್ತಿರುವ ವ್ಯತ್ಯಾಸ ಗಮನಿಸಿದ ಸುಪ್ರೀಂಕೋರ್ಟ್‌ ಎಲ್ಲ ವರದಿಗಳನ್ನು ತರಿಸಿಕೊಂಡು ಬಹಿರಂಗಪಡಿಸಿದಾಗ ಅನೇಕ ಸತ್ಯಗಳು ಬಯಲಿಗೆ ಬಂದಿವೆ. ಐಟಿ, ಇಡಿ ದಾಳಿ ನಡೆದ ಕಂಪನಿಗಳು ಚಂದಾ ಕೊಟ್ಟಿವೆ. ಅನಂತರ ಅವರ ಮೇಲಿನ ಪ್ರಕರಣಗಳು ಮುಚ್ಚಿ ಹೋಗಿವೆ. ಲಾಭವೇ ಇಲ್ಲದ ಕಂಪನಿಗಳು ಸಾವಿರ ಕೋಟಿ ದೇಣಿಗೆ ನೀಡಿವೆ. ಇದನ್ನು ಪ್ರಶ್ನೆ ಮಾಡಿದವರ ಮೇಲೆ ದೂರು ದಾಖಲಿಸಿ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದ್ದಾರೆ ಎಂದು ಹೇಳಿದರು.

Advertisement

ಹಿಂದೂ ಧರ್ಮ ಹಾಗೂ ದೇಶದ ಪರಂಪರೆಯಲ್ಲಿ ನಾಯಕನಾದವನು ಸತ್ಯ, ಧರ್ಮದ ಹಾದಿಯಲ್ಲಿರಬೇಕು. ಅಂಥವರು ನಮ್ಮ ನಾಯಕರಾಗಿರಬೇಕು. ಇದಕ್ಕೆ ಶ್ರೀರಾಮ, ಮಹಾತ್ಮಾ ಗಾಂಧಿಧೀಜಿ, ಹಿಂದಿನ ಅನೇಕ ಪ್ರಧಾನಿಗಳ ಉದಾಹರಣೆಯಿದೆ. ಆದರೆ, ಈಗಿನ ನಮ್ಮ ನಾಯಕರು ನಾಟಕ ಮಾಡುವವರಾಗಿದ್ದಾರೆ. ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿದರೂ ನಮ್ಮ ಮಾಧ್ಯಮಗಳು ಮೋದಿ ಮಾಸ್ಟರ್‌ ಸ್ಟ್ರೋಕ್‌ ಎನ್ನುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕೊಡುತ್ತಿಲ್ಲ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈವರೆಗೂ ಅನುದಾನ ನೀಡಿಲ್ಲ. ಕಳಸಾ ಬಂಡೂರಿ, ರಾಯಚೂರು ಜಿಲ್ಲೆಯ ಏಮ್ಸ್‌ ಬೇಡಿಕೆಗೂ ಸ್ಪಂದಿಸಿಲ್ಲ ಎಂದು ದೂರಿದರು.

ಅನ್ಯಾಯ ಏಕೆ ಮಾಡುತ್ತಾರೆ. ಶುದ್ಧ ನಿಯತ್ತು, ಶುದ್ಧ ಹೃದಯದಿಂದ ಮೋದಿ ಕೆಲಸ ಮಾಡುತ್ತಿಲ್ಲ ಅವರಿಗೆ ಎಲ್ಲಿ ರಾಜಕೀಯ ಲಾಭವಾಗುತ್ತೋ ಅಲ್ಲಿಗೆ ಮಾತ್ರ ಅನುದಾನ ಕೊಡುತ್ತಾರೆ ಎಂದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೆ ಒಂದು ಲಕ್ಷ ರೂ. ಕೊಡುವ “ಮಹಾಲಕ್ಷ್ಮಿ’ ಯೋಜನೆ ರೂಪಿಸಲಾಗಿದೆ. ನರೇಗಾ ಕೂಲಿಯನ್ನು ರೂ.400ಕ್ಕೂ ಹೆಚ್ಚಿಸಲಾಗುತ್ತದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌, ಸಚಿವ ಡಿ.ಸುಧಾಕರ್‌, ಮುಖಂಡ ಬಿ.ಕೆ.ಹರಿಪ್ರಸಾದ್‌ ಇನ್ನಿತರರು ಭಾಗವಹಿಸಿದ್ದರು.

ಕಾಡುಗೊಲ್ಲರಿಗೆ ಎಸ್ಟಿ ಮೀಸಲು
ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗುವುದು ಎಂದೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.ದೇಶಾದ್ಯಂತ ಜಾತಿಗಣತಿ ನಡೆಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗುವುದು. ರೈತರಿಗೆ ಬೆಂಬಲ ಬೆಲೆ, ಬೆಳೆ ಹಾನಿಗೆ 30 ದಿನಗಳಲ್ಲಿ ಪರಿಹಾರ ನೀಡುವುದು, ಕೃಷಿಯನ್ನು ಜಿಎಸ್‌ಟಿ ಮುಕ್ತ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next