ಬೆಂಗಳೂರು: ಪ್ರಸಿದ್ದ ಆನ್‍ಲೈನ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ದೇಶದ ಅತಿದೊಡ್ಡ ಫುಲ್ ಫಿಲ್ಮೆಂಟ್ ಸೆಂಟರ್ ಅನ್ನು ಪಶ್ಚಿಮ ಬಂಗಾಳದ ಹರಿಂಗಟಾದಲ್ಲಿ ಆರಂಭಿಸಿದೆ. ಮಾರಾಟಗಾರರು, ಕುಶಲಕರ್ಮಿಗಳು ಮತ್ತು ಯುವ ಉತ್ಸಾಹಿಗಳಿಗೆ ದೊಡ್ಡ ಮಟ್ಟದ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ ಪ್ರಮುಖ ಹೆಜ್ಜೆ ಇದಾಗಿದೆ.
ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಯುವಜನರಿಗೆ 11,000 ಕ್ಕೂ ಹೆಚ್ಚು ಉದ್ಯೋಗಾವಕಾಶ ಮತ್ತು 20,000 ಕ್ಕೂ ಅಧಿಕ ಮಾರಾಟಗಾರರಿಗೆ ಬೆಂಬಲ ನೀಡುವ ತಂತ್ರಜ್ಞಾನ ಆಧಾರಿತ ಈ ಕೇಂದ್ರವನ್ನು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉದ್ಘಾಟಿಸಿದರು.
ಕೋಲ್ಕತ್ತಾದಿಂದ 50 ಕಿಲೋಮೀಟರ್ ದೂರದಲ್ಲಿರುವ ಬಿಗ್ ಬಾಕ್ಸ್ ಸೌಲಭ್ಯವು 110 ಎಕರೆ ವಿಸ್ತೀರ್ಣದಲ್ಲಿದ್ದು, ಸಮಗ್ರ ಪೂರೈಕೆ ಸರಪಳಿಯನ್ನು ನಿರ್ವಹಣೆ ಮಾಡುತ್ತದೆ. ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಪ್ರದೇಶದ ಸಾವಿರಾರು ಮಾರಾಟಗಾರರನ್ನು ರಾಷ್ಟ್ರೀಯ ಮಾರುಕಟ್ಟೆ ವ್ಯಾಪ್ತಿಗೆ ತರುವ ಮೂಲಕ ಬಲವಾದ ಪೂರೈಕೆ ಸರಪಳಿ ಮೂಲಸೌಕರ್ಯಗಳ ಲಭ್ಯತೆಯೊಂದಿಗೆ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ ಹಾಗೂ ಬೆಳೆಯುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ.
ಆರು ಮೆಝನೈನ್ ಲೆವೆಲ್ ಗಳಲ್ಲಿ ಐದು ಮಿಲಿಯನ್ ಕ್ಯೂಬಿಕ್ ಅಡಿಗಳಷ್ಟು ಸ್ಟೋರೇಜ್ ಸಾಮರ್ಥ್ಯದ ಈ ಹರಿಂಗಟಾ ಫುಲ್ ಫಿಲ್ಮೆಂಟ್ ಸೆಂಟರ್ ಎರಡು ಮಿಲಿಯನ್ ಚದರಡಿ ಪ್ರದೇಶದ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದೆ. ಆಟೋಮೇಟೆಡ್ ಸ್ಟೋರೇಜ್ ಮತ್ತು ರಿಟ್ರೀವಲ್, ರೊಬೋಟಿಕ್ ಪ್ಯಾಕೇಜಿಂಗ್ ಆರ್ಮ್ಸ್, ಕ್ರಾಸ್ ಬೆಲ್ಟ್ ಸೋರ್ಟರ್ಸ್ ಮತ್ತು ಶಿಪ್ ಮೆಂಟ್ ಪ್ರಕ್ರಿಯೆಗಳ ಪ್ರಮಾಣವನ್ನು ಶೇ.35ರಿಂದ 50 ರಷ್ಟು ಕಡಿಮೆ ಮಾಡುವ 9 ಕಿಲೋಮೀಟರ್ ಉದ್ದದ ನೆಟ್ ವರ್ಕ್ ಕನ್ವೇಯರ್ ಬೆಲ್ಟ್ ನಂತಹ ಹಲವಾರು ತಂತ್ರಜ್ಞಾನಗಳ ವಿನ್ಯಾಸವನ್ನು ಹೊಂದಿದೆ. ಸಿಸ್ಟಂ ಚಾಲಿತ ಕೆಲಸ ವಿತರಣೆ, ಸ್ಟೋರೇಜ್ ನಲ್ಲಿ ಆಟೋಮೇಶನ್, ಪ್ರಕ್ರಿಯೆ ಮತ್ತು ಹಂಚಿಕೆಯೊಂದಿಗೆ ಈ ಎಫ್ ಸಿಯನ್ನು ಗ್ರಾಹಕರು ಮತ್ತು ಮಾರಾಟಗಾರರ ಪರಿಸರ ವ್ಯವಸ್ಥೆಗಾಗಿ ಮೌಲ್ಯ ರಚನೆಗಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ:ಪಿಟ್ರಾನ್ ಫೋರ್ಸ್ ಎಕ್ಸ್ 11 ಸ್ಮಾರ್ಟ್ ವಾಚ್ ಮಾರುಕಟ್ಟೆಗೆ
ಸುಸ್ಥಿರವಾದ ಪೂರೈಕೆ ಜಾಲವನ್ನು ನಿರ್ಮಿಸಲು ಫ್ಲಿಪ್ ಕಾರ್ಟ್ ನ ಬದ್ಧತೆಗೆ ಪುರಾವೆಯಾಗಿ, ಹರಿಂಗಟಾ ಸೌಲಭ್ಯವು ಇಂಡಿಯನ್ ಗ್ರೀನ್ ಬಿಲ್ಡಿಂಗ್ಸ್ ಕೌನ್ಸಿಲ್ (ಐಜಿಬಿಸಿ)ಯಿಂದ ಪ್ಲಾಟಿನಂ ರೇಟಿಂಗ್ ನೊಂದಿಗೆ ಪ್ರಮಾಣೀಕರಿಸಲ್ಪಟ್ಟಿದೆ. ಈ ಮೂಲಕ ಇಂತಹ ಪ್ರಮಾಣಪತ್ರವನ್ನು ಪಡೆದ ದೇಶದ ಮೊದಲ ಇ-ಕಾಮರ್ಸ್ ಸೌಲಭ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಜಿಬಿಸಿ ಗ್ರೀನ್ ಲಾಜಿಸ್ಟಿಕ್ ಪಾರ್ಕ್ ಗಳು ಮತ್ತು ವೇರ್ ಹೌಸ್ ರೇಟಿಂಗ್ ಸಿಸ್ಟಂ ಆಗಿದೆ.
ಫ್ಲಿಪ್ ಕಾರ್ಟ್ ಗ್ರೂಪ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ, “ಮಾರಾಟಗಾರರು, ಗ್ರಾಹಕರು, ಕುಶಲಕರ್ಮಿಗಳು, ಕಿರಾಣಗಳು ಮತ್ತು ರೈತ ಸಮುದಾಯದ ಪರಿಸರ ವ್ಯವಸ್ಥೆಗೆ ಹಂಚಿಕೆಯ ಮೌಲ್ಯವನ್ನು ರಚಿಸುವ ಸಂದರ್ಭದಲ್ಲಿ ಇ-ಕಾಮರ್ಸ್ ಪ್ರತಿಯೊಬ್ಬ ಭಾರತೀಯನನ್ನು ನಿಜವಾಗಿಯೂ ಸಂಪರ್ಕಿಸುವ ಶಕ್ತಿಯನ್ನು ಹೊಂದಿದೆ. ಲಕ್ಷಾಂತರ ಸಣ್ಣ ಮತ್ತು ದೊಡ್ಡ ವ್ಯವಹಾರಗಳನ್ನು ಸಂಪರ್ಕಿಸಲು ಬಲವಾದ ಪೂರೈಕೆ ಜಾಲವು ಬೆನ್ನೆಲುಬಾಗಿದೆ ಹಾಗೂ ಸ್ವದೇಶಿ ಇ ಮಾರುಕಟ್ಟೆಯಾಗಿ ದೇಶದ ಆರ್ಥಿಕ ಬೆಳವಣಿಗೆಗೆ ಈ ಅವಕಾಶಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಹರಿಂಗಟಾದಲ್ಲಿನ ಫುಲ್ ಫಿಲ್ಮೆಂಟ್ ಕೇಂದ್ರದ ಪ್ರಾರಂಭದಿಂದ ಪೂರೈಕೆ ಜಾಲದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದರು.