Advertisement

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಚಿತ್ರದುರ್ಗದಲ್ಲಿ ಯಶಸ್ವಿ

09:55 AM Jul 02, 2022 | Team Udayavani |

ನಾಯಕನಹಟ್ಟಿ: ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಇಲ್ಲಿಗೆ ಸನಿಹದ ವೈಮಾನಿಕ ಪರೀಕ್ಷಾ ಕ್ಷೇತ್ರ (ಎಟಿಆರ್‌)ದಲ್ಲಿ ನಡೆಸಿದ ದೇಶದ ಮೊದಲ ಸ್ವಾಯತ್ತ ಮಾನವರಹಿತ ವಿಮಾನ (ಯುಎವಿ)ದ ಹಾರಾಟ ಶುಕ್ರವಾರ ಯಶಸ್ವಿಯಾಗಿ ನಡೆಯಿತು.

Advertisement

ಬೆಳಗ್ಗೆ 6.15ಕ್ಕೆ ಆರಂಭವಾದ ಈ ವಿಶಿಷ್ಟ ಪರೀಕ್ಷೆ 15 ನಿಮಿಷಗಳ ಕಾಲ ಜರಗಿತು. ದೊಡ್ಡ ಪ್ರಮಾಣದ ಚಾಲಕ ರಹಿತ ವಿಮಾನ ಹಾರಾಟದತ್ತ ಪ್ರಥಮ ಹೆಜ್ಜೆಯಾದ ಈ ವಿಮಾನ ಹಾರಾಟ ಪರೀಕ್ಷೆಯಿಂದ ದೇಶವು ಚಾಲಕ ರಹಿತ ವಿಮಾನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾ ಧಿಸು ವತ್ತ ಪ್ರಥಮ ಯಶಸ್ವೀ ಹೆಜ್ಜೆ ಇರಿಸಿದಂತಾಗಿದೆ. ಇದಕ್ಕೆ ಮುನ್ನ ಗುರುವಾರ ರನ್‌ವೇಯಲ್ಲಿ ವಿಮಾನವನ್ನು ಪೂರ್ಣ ಪ್ರಮಾಣದ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.
ಶುಕ್ರವಾರ ಬೆಳಗ್ಗೆ 3 ಕಿ.ಮೀ. ಉದ್ದದ ರನ್‌ ವೇಯಿಂದ ಪೈಲಟ್‌ ಇಲ್ಲದೆ ಹಾರಿದ ವಿಮಾನ ಸರಾಗವಾಗಿ ಸತತ 15 ನಿಮಿಷ ಕಾಲ ಹಾರಾಟ ನಡೆಸಿತು. ರನ್‌ ವೇಯಿಂದ ಹೊರಟ ವಿಮಾನ ವಿವಿಧ ದಿಕ್ಕುಗಳೆಡೆ ಚಲನೆ, ಹಾರಾಟ ಮತ್ತು ಇಳಿಯುವಿಕೆಯಲ್ಲಿ ನಿಖರತೆ ಪ್ರದರ್ಶಿಸಿತು.

ಆತ್ಮನಿರ್ಭರ ಪ್ರಯತ್ನಕ್ಕೆ ಪೂರಕ
ಪ್ರಧಾನಿ ಮೋದಿ ಅವರ ಕನಸಾದ ರಕ್ಷಣ ಕ್ಷೇತ್ರದಲ್ಲಿ ಆತ್ಮನಿರ್ಭರ ಪ್ರಯತ್ನಕ್ಕೆ ಈ ಪರೀಕ್ಷೆ ಪೂರಕವಾಗಿದೆ. ಮೊದಲ ಹಂತದಲ್ಲಿ 15 ನಿಮಿಷ, ಅನಂತರ 30 ನಿಮಿಷ, ಬಳಿಕ ಸತತ 24 ತಾಸು ಹಾರುವ ಕ್ಷಮತೆಯ ಪರೀಕ್ಷೆ ನಡೆಸಲಾಗುತ್ತದೆ. ಅನಂತರದ ಹಂತದಲ್ಲಿ ವಿಮಾನದ ಗಾತ್ರವನ್ನು ಹೆಚ್ಚಿಸಲಾಗುತ್ತದೆ. ಇದೇ ಕೇಂದ್ರದಲ್ಲಿ ರುಸ್ತುಂ 1 ಮತ್ತು ರುಸ್ತುಂ 2 ಚಾಲಕ ವಿಮಾನ ಹಾರಾಟಗಳು ಯಶಸ್ವಿಯಾಗಿದ್ದವು. ಈ ತಂತ್ರಜ್ಞಾನವನ್ನು ಡಿಆರ್‌ಡಿಒದ ಅಂಗ ಸಂಸ್ಥೆ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ಎಡಿಇ) ಅಭಿವೃದ್ಧಿಪಡಿಸಿದೆ.
ಚಾಲಕ ರಹಿತ ವಿಮಾನ ಯಶಸ್ವಿಯಾಗಿ ಹಾರಾಡಿ ಮರಳುತ್ತಿದ್ದಂತೆ ಎಟಿಆರ್‌ ಸಿಬಂದಿ ಮತ್ತು ತಾಂತ್ರಿಕ ಸಿಬಂದಿ ಹರ್ಷದಿಂದ ಕುಣಿದು ಕುಪ್ಪಳಿಸಿದರು, ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ರಾಜನಾಥ ಸಿಂಗ್‌ ಅಭಿನಂದನೆ
ಪ್ರಯೋಗ ಯಶಸ್ವಿ ಆಗುತ್ತಿದ್ದಂತೆ ರಕ್ಷಣ ಸಚಿವ ರಾಜನಾಥ ಸಿಂಗ್‌ ಅವರು ತಂತ್ರಜ್ಞರನ್ನು ಅಭಿನಂದಿಸಿದ್ದಾರೆ. ಚಾಲಕ ರಹಿತ ವಿಮಾನ ಅಭಿವೃದ್ಧಿಗೆ ಇದು ದಾರಿ ಮಾಡಿ ಕೊಡಲಿದೆ. ಅತ್ಯಂತ ಕಠಿನ ಮಿಲಿಟರಿ ಪರಿಸ್ಥಿತಿಗಳಲ್ಲಿ ಆತ್ಮನಿರ್ಭರ ಭಾರತಕ್ಕೆ ಇದು ಸಹಾಯಕಾರಿ ಆಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಡಿಆರ್‌ಡಿಒ ಚೇರ್ಮನ್‌, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯದರ್ಶಿ ಡಾ| ಜಿ. ಸತೀಶ್‌ ರೆಡ್ಡಿ ಕೂಡ ತಂತ್ರಜ್ಞಾನದ ಯೋಜನೆಯ ರೂಪಿಸುವಿಕೆ, ಅಭಿವೃದ್ಧಿ ಮತ್ತು ಪ್ರಯೋಗದಲ್ಲಿ ಭಾಗಿಯಾದ ಸಿಬಂದಿಯನ್ನು ಅಭಿನಂದಿಸಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next